

ಬಳ್ಳಾರಿ : ಅರಣ್ಯ ಉತ್ಪನಗಳ ರಕ್ಷಣೆ ಮತ್ತು ಮರ ಕಳ್ಳಸಾಗಣೆ ತಡೆಯಲು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಹಕಾರ ಅಗತ್ಯ ಎಂದು ಬೆಂಗಳೂರು ಅರಣ್ಯ ಘಟಕದ ಸಿಐಡಿಯ ಎಡಿಜಿಪಿ ಕೆ.ವಿ.ಶರತ್‌ಚಂದ್ರ ಹೇಳಿದರು.
ನಗರದ ವಿಮ್ಸ್ ಆವರಣದಲ್ಲಿರುವ ಹಳೇ ಪೋಸ್ಟ್ ಆಫೀಸ್ ಕಟ್ಟಡದಲ್ಲಿ ಹೊಸದಾಗಿ ಭಾನುವಾರ ಸಿಐಡಿ ಪೊಲೀಸ್ ಠಾಣೆಯ ಅರಣ್ಯ ಸಂಚಾರಿ ದಳ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವನ್ಯ ಜೀವಿಗಳನ್ನು ಬೇಟೆ ಆಡುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ವನ್ಯ ಜೀವಿಗಳನ್ನು ರಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಪುತ್ತೂರಿನಿಂದ ರಾಜ್ಯ ಸರ್ಕಾರದ ಆದೇಶದಂತೆ ಇಲ್ಲಿಗೆ ಠಾಣೆಯನ್ನು ಸ್ಥಳಂತಾರಿಸಲಾಗಿದೆ. ಜಿಲ್ಲೆಯಲ್ಲಿ ಅರಣ್ಯ ಸಂಚಾರಿ ದಳ ಕಾರ್ಯ ನಿರ್ವಹಿಸುತ್ತಿದ್ದು, ಈ ಠಾಣಾ ಕಾರ್ಯ ವ್ಯಾಪ್ತಿಗೆ ಮೂರು ಜಿಲ್ಲೆಗಳ ಬರಲಿವೆ. ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳದಲ್ಲಿ ನಿರ್ವಹಿಸಲಿದೆ ಎಂದರು.
ವನ್ಯ ಜೀವಿಗಳ ಮಾರಾಟ ಮಾಡುವವರನ್ನು ಕಂಡು ಹಿಡಿದು ಸೂಕ್ತ ದಾಖಲೆಗಳ ಸಂಗ್ರಹಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅರಣ್ಯ ಸಂಚಾರಿ ದಳಕ್ಕೆ ಒಂದು ಉತ್ತಮವಾದ ಕಚೇರಿ ಇರಲಿಲ್ಲ. ಆದರೆ, ಈಗ ವಿಮ್ಸ್ ನಿರ್ದೇಶಕರು ಕಟ್ಟಡವನ್ನು ನೀಡಿದ್ದಾರೆ. ಈ ದಳದಿಂದ ಉತ್ತಮವಾದ ಕಾರ್ಯ ನಡೆಯಲಿ, ವನ್ಯಜೀವಿಗಳ ರಕ್ಷಣೆಯಾಗಲಿ ಎಂದರು.
ಆಮೆ, ಹಾವು, ಮೊಲ ಸೇರಿದಂತೆ ಇತರ ಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುವ ಜಾಲವನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಜತೆಗೆ ಸಾರ್ವಜನಿಕರು ವನ್ಯಜೀವಿಗಳನ್ನು ಸಂರಕ್ಷಣೆ ಮಾಡವಲ್ಲಿ ಠಾಣೆಯ ಜತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಎಸ್ಪಿ ನಟರಾಜ್ ಹಾಗೂ ಆರಣ್ಯ ಇಲಾಖೆ ಸಿಬ್ಬಂದಿ, ವಿವಿಧ ಠಾಣೆಯ ಅಧಿಕಾರಿಗಳು ಇದ್ದರು.