

ನಂಜನಗೂಡು: ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿ ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಅಬಕಾರಿ ಇಲಾಖೆಯ ಮೈಸೂರು ಗ್ರಾಮಾಂತರ ಉಪ ಆಯುಕ್ತೆ ಡಾ.ಮಹದೇವಿ ಬಾಯಿ ತಿಳಿಸಿದರು.
ನಗರದ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಗುರುವಾರ ತಾಲೂಕಿನ ಬಾರ್ ಸನ್ನದುರಾರರ ಜತೆ ಸಭೆ ನಡೆಸಿ ಮಾತನಾಡಿದರು. ಆದಿವಾಸಿಗಳು ವಾಸಿಸುವ ಕಾಲನಿ ಮತ್ತು ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಹಾಗೂ ನಾಗಣಾಪುರ ಕಾಲನಿಯಲ್ಲಿ ಮದ್ಯ ಸೇವಿಸಿ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸನ್ನದುದಾರರ ಜತೆ ಸಭೆ ನಡೆಸಿ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬಾರ್‌ಗಳಿಂದ ಹಳ್ಳಿಗಳಲ್ಲಿರುವ ಕಿರಾಣಿ ಅಂಗಡಿಗಳು ಮತ್ತು ಪೆಟ್ಟಿ ಅಂಗಡಿಗಳಿಗೆ ಮದ್ಯವನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಒಂದು ವೇಳೆ ಬಾರ್‌ಗಳಿಂದ ಸರಬರಾಜು ಮಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಬಾರ್ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಎಚ್.ಡಿ ಕೋಟೆ, ತಿ.ನರಸೀಪುರ ಭಾಗಗಳಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ನಂಜನಗೂಡು ತಾಲೂಕಿನಲ್ಲಿ ವಿಶೇಷವಾಗಿ 5 ತಂಡಗಳನ್ನು ರಚಿಸಲಾಗಿದೆ. 5 ತಂಡಗಳಿಗೂ ನಿರ್ದೇಶನ ನೀಡಲಾಗಿದ್ದು, ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಅಬಕಾರಿ ಇಲಾಖೆಯ ದೂ.9449597184 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕರಾದ ನಟರಾಜ್, ನಂಜನಗೂಡು ವಲಯ ಅಬಕಾರಿ ನಿರೀಕ್ಷಕ ನಾಗೇಂದ್ರ, ಅಬಕಾರಿ ಉಪ ನಿರೀಕ್ಷಕ ಅಬ್ಜಲ್, ಸಿಬ್ಬಂದಿ ಚಂದ್ರು, ಅಭಿ, ಮಧುಕೇಶ್, ಶಿಲ್ಪಾ ಇತರರಿದ್ದರು.