

ಕಡೂರು: ಸರಸ್ವತಿಪುರ ಗ್ರಾಮದಲ್ಲಿ ಹೊಸದಾಗಿ ಶಾಖಾ ಕಚೇರಿ ಹಾಗೂ ವಿದ್ಯುತ್ ವಿತರಣಾ ಕೇಂದ್ರ ಆರಂಭಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಸೋಮಶೇಖರ್ ತಿಳಿಸಿದರು.
ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರ ಒತ್ತಾಯ, ಶಾಸಕರ ಸೂಚನೆಯಂತೆ ಶಾಖಾ ಕಚೇರಿ ಆರಂಭಕ್ಕೆ ಪ್ರಸ್ತಾವನೆಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು. ಶಾಖಾ ಕಚೇರಿ ಆರಂಭದಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಮೆಸ್ಕಾಂ ಸೇವೆ ಲಭ್ಯವಾಗಲಿದೆ ಎಂದರು.
ನಾಗರಾಳು ಗ್ರಾಮದ ರವಿ ಮಾತನಾಡಿ, ಕಳೆದ ಎರಡು ಜನಸಂಪರ್ಕ ಸಭೆಯಲ್ಲಿ ಹೆಚ್ಚುವರಿ ಟಿಸಿಯನ್ನು ಅಳವಡಿಸಿಕೊಡುವಂತೆ ಕೋರಿಕೊಂಡಿದ್ದರೂ ಇದುವರೆಗೂ ಟಿಸಿ ಅಳವಡಿಸಲು ಮೆಸ್ಕಾಂ ಅಭಿಯಂತರರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಟಿಸಿ ಅಳವಡಿಕೆಗೆ ಯೂನಿಕೋಡ್ ರಚಿಸಿಕೊಡಲಾಗುವುದು ಮೆಸ್ಕಾಂ ಅಧೀಕ್ಷಕ ತಿಳಿಸಿದರು.
ಗುಣಸಾಗರ ಗ್ರಾಮದ ತೋಟದ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಗ್ರಾಮದ ನವೀನ್ ಹಾಗೂ ಎನ್.ಬಸವರಾಜಪ್ಪ ಒತ್ತಾಯಿಸಿದರು.
ಅಧೀಕ್ಷಕ ಸೋಮಶೇಖರ್ ಮಾತನಾಡಿ, ನಿರಂತರ ಜ್ಯೋತಿ ಕಾಮಗಾರಿ ಪೂರ್ಣಗೊಂಡಿದ್ದು, ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಿಡಘಟ್ಟ ಭಾಗದ ಮೆಸ್ಕಾಂ ಶಾಖಾಧಿಕಾರಿಗಳಿಗೆ ಸೂಚಿಸಿದರು.
ಮೆಸ್ಕಾಂ ಎಇ ಲಿಂಗರಾಜು, ಪ್ರಭಾರ ಎಇಇ ಸಿ.ಎನ್.ಮಂಜೇಗೌಡ, ತಾಂತ್ರಿಕ ಶಾಖೆ ಅಭಿಯಂತರ ಸಿ.ಎಂ.ಪ್ರಸನ್ನ, ಕಿರಿಯ ಅಭಿಯಂತರರಾದ ಆರ್.ಎಸ್.ಬಸವರಾಜಪ್ಪ, ಆರ್.ಶಿವಕುಮಾರ್, ಎಚ್.ಎಂ.ಪ್ರಶಾಂತ್, ಸಿ.ವಿ.ರಾಜು, ಆರ್.ವೀರೇಶ್, ಲೋಹಿತ್ ಇತರರಿದ್ದರು.