

ಶಿವಮೊಗ್ಗ: ರಾಜ್ಯದಲ್ಲಿ ಗಾಂಜಾ ಹಾಗೂ ಮಾದಕದ್ರವ್ಯಗಳ ಮಾರಾಟ ಜಾಲವನ್ನು ಬುಡಸಮೇತ ಕಿತ್ತುಹಾಕಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಗಾಂಜಾ ನಿಯಂತ್ರಣಕ್ಕೆ ಮತ್ತು ಸಂಪೂರ್ಣ ನಾಶಕ್ಕೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಎಸ್‌ಪಿ, ಡಿಸಿಪಿಗಳ ವ್ಯಾಪ್ತಿಯಲ್ಲಿ ಗಾಂಜಾ ಕೇಸ್‌ಗಳು ಮಿತಿಮೀರಿದರೆ ಅವರನ್ನೇ ಹೊಣೆಯಾಗಿಸುವುದಾಗಿ ಈಗಾಗಲೇ ಅಧಿಸೂಚನೆ ನೀಡಿದ್ದೇನೆ. ಗಾಂಜಾ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಬೆಂಗಳೂರಿನಲ್ಲಿ ನಿನ್ನೆಯಷ್ಟೆ ಒಂದೂವರೆ ಕೋಟಿ ರೂ.ಗಳ ಗಾಂಜಾ ವಶಪಡಿಸಿಕೊಂಡು ನೈಜೀರಿಯಾದ ಪ್ರಜೆಯನ್ನು ಬಂಧಿಸಲಾಗಿದೆ. ವಾರದ ಹಿಂದೆ 5 ಕೋಟಿ ರೂ.ಗಳ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದರು.
ತುಮಕೂರಿನಲ್ಲಿ ಏರ್‌ಪೋರ್ಟ್‌ಗೆ ಇಂಗಿತ
ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಇನ್ನೂ ಅಂತಿಮವಾಗಿಲ್ಲ. ವರದಿ ಆಧಾರದ ಮೇಲೆ ಅದು ತೀರ್ಮಾನವಾಗಲಿದೆ. ಈ ಕುರಿತು ಡಿಜಿಸಿಎ (ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ) ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ನಾನು ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಬೇಕೆಂದು ಹೇಳುತ್ತೇನೆ. ಆದರೆ ತಜ್ಞರ ವರದಿಯೇ ಅಂತಿಮವಾಗಲಿದೆ ಎಂದು ಹೇಳಿದರು.