

ಶಿವಮೊಗ್ಗ : ದಕ್ಷ ಆಡಳಿತಗಾರರಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದರೂ ಜೀವನಪರ್ಯಂತ ಸೇವಾಮಯಿಯಾಗೇ ಉಳಿದು ನಮ್ಮೆಲ್ಲರಿಗೂ ಮಾದರಿಯಾಗಿರುವವರು ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಣ್ಣಿಸಿದರು.
ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಓರ್ವ ಸಕ್ರಿಯ ರಾಜತಾಂತ್ರಿಕನಾಗಿ, ಸಮಾಜ ಸುಧಾರಕರಾಗಿದ್ದ ಬಾಬು ಜಗಜೀವನರಾಂ ಹಸಿರು ಕ್ರಾಂತಿಯ ಪಿತಾಮಹರಾಗಿ ಆಹಾರ ರಂಗದಲ್ಲಿ ಸ್ವಾವಲಂಬನೆ ಹೊಂದಲು ಮಾರ್ಗದರ್ಶನ ನೀಡಿದ್ದರು ಎಂದರು.
ಸಂವಿಧಾನಕ್ಕೆ ಡಾ. ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಸೇರಿದಂತೆ ಅನೇಕ ಮಹನೀಯರ ಕೊಡುಗೆ ಇದೆ. ನಮ್ಮ ಸಂವಿಧಾನ ಮೂಲ ಹಕ್ಕುಗಳನ್ನು ನೀಡಿರುವುದರಿಂದಲೇ ನಾವಿಂದು ಪ್ರಶ್ನಿಸುವ ಮತ್ತು ಉತ್ತರಿಸುವ ಹಕ್ಕನ್ನು ಹೊಂದಿದ್ದೇವೆ. ಮಾನವೀಯ ಹಕ್ಕುಗಳೇ ಸಂವಿಧಾನದ ಮೂಲಾಧಾರ ಎಂದರು.
ಸುಮಾರು 1.8 ಕೋಟಿ ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಶಾಲೆಯಲ್ಲಿ ಸಂವಿಧಾನ ಪೀಠಿಕೆಯನ್ನು ಓದುವಂತೆ ಸರ್ಕಾರ ಆದೇಶಿಸಿದೆ. ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಪೌಷ್ಟಿಕ ಆಹಾರ ಕೂಡ ನೀಡುತ್ತಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರೆಲ್ಲ ಮುಂದೆ ಬರಬೇಕೆಂದು ಎಲ್ಲರಿಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಸಂಘಟನೆಗಳು ಹಿರಿಯರ ಮಾರ್ಗದರ್ಶನದಿಂದ ಶಕ್ತಿ ಪಡೆಯಬೇಕು. ಸಂಘಟನೆಗಳು ಶಕ್ತಿಯಾಗಿ ಹೊರಹೊಮ್ಮಬೇಕು. ನಗರದಲ್ಲಿ ಬಾಬು ಜಗಜೀವನರಾಂ ಅವರ ಪುತ್ಥಳಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಡಾ. ಬಾಬು ಜಗಜೀವನರಾಂ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಶಿಫಾರಸು ಮಾಡುವ ಸಂಬಂಧ ಸಿಎಂ ಹಾಗೂ ಸರ್ಕಾರದ ಹಿರಿಯರೊಂದಿಗೆ ಚರ್ಚಿಸಲಾಗುವುದು ಎಂದರು.
ಸಾಹಿತಿ ಮೈಸೂರಿನ ದಾಸನೂರು ಕೂಸಣ್ಣ ಉಪನ್ಯಾಸ ನೀಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್‌ಬಾನು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಎನ್.ಹೇಮಂತ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ ಇತರರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಗ್ಯಾರಂಟಿ ಸರ್ಕಾರದ ವಿಕಾಸಪಥ ಕಿರು ಪುಸ್ತಕವನ್ನು ಮಧು ಬಂಗಾರಪ್ಪ ಬಿಡುಗಡೆ ಮಾಡಿದರು. ಭದ್ರಾವತಿಯ ಸಿದ್ದಾರ್ಥ ಅಂಧರ ಕೇಂದ್ರದ ಮುಖ್ಯಸ್ಥ ಶಿವಬಸಪ್ಪ ಅವರನ್ನು ಸನ್ಮಾನಿಸಲಾಯಿತು.