ಮೈಸೂರಿನಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಕ್ರಮ

mysore
Published on

ಮೈಸೂರು: ಲೋಕಸಭಾ ಚುನಾವಣೆಯ ಸಂಬಂಧ ಜಿಲ್ಲೆಯಲ್ಲಿ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸಲು ಮತ್ತು ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಹಾಗೂ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ರಚನೆ ಮಾಡಲಾಗಿದ್ದು, ಸ್ವೀಪ್ ಕಾರ್ಯಕ್ರಮ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅಂಗವಿಕಲರು, ಹಿರಿಯ ನಾಗರಿಕರು, ತೃತೀಯ ಲಿಂಗಿಗಳು ಹಾಗೂ ವಲಸೆ ಕಾರ್ಮಿಕರು ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಗೊಳ್ಳುವ ಸಲುವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಉತ್ತಮ ಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಿದರು.


ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಆ ಭಾಗದಲ್ಲಿ ಸೂಕ್ತ ಯೋಜನೆ ರೂಪಿಸಿಕೊಂಡು ಸ್ವೀಪ್ ಚಟುವಟಿಕೆ ನಡೆಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.


ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿಗಳು, ಎಲ್ಲ ಇಲಾಖೆಗಳು ಕೈಗೊಳ್ಳುವ ಸ್ವೀಪ್ ಚಟುವಟಿಕೆ ಬಗ್ಗೆ ಮಾಹಿತಿ ಪಡೆದು ನಿತ್ಯ ಪತ್ರಿಕೆಗಳಲ್ಲಿ ಪ್ರಚಾರ ಮಾಡಬೇಕು. ಮೈಸೂರು ಆಕಾಶವಾಣಿ ಮೂಲಕ ಜನಸಾಮಾನ್ಯರಿಗೆ ಮತದಾನದ ಮಹತ್ವ ಬಗ್ಗೆ ಅಮೂಲ್ಯ ವ್ಯಕ್ತಿಗಳ ಸಂದರ್ಶನ, ಮತದಾನದ ಹಾಡುಗಳ ಮೂಲಕ ಅರಿವು ಮೂಡಿಸಬೇಕು ಎಂದರು.


ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯನ್ನು ನಡೆಸುವ ಮೂಲಕ ಯುವ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರಿಗೆ ಮತದಾನದ ಮಹತ್ವದ ಬಗ್ಗೆ ಬೀದಿ ನಾಟಕ, ಕಿರು ನಾಟಕಗಳ ಮೂಲಕ ಅರಿವು ಮೂಡಿಸಬೇಕು ಎಂದು ನಿರ್ದೇಶಿಸಿದರು.


ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನಸಾಮಾನ್ಯರಿಗೆ ಮನೆ ಮನೆಗಳಿಗೆ ತೆರಳಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು.


ಎಲ್ಲ ಸಮಿತಿ ಸದಸ್ಯರು ತಮಗೆ ವಹಿಸಿದ ಕಾರ್ಯಹಂಚಿಕೆ ವ್ಯಾಪ್ತಿಯಲ್ಲಿ ನಡೆಸುವ ಸ್ವೀಪ್ ಚಟುವಟಿಕೆ ಸಂಬಂಧ ನಿತ್ಯ ಚಟುವಟಿಕೆ ಕೈಗೊಳ್ಳಬೇಕು. ಸ್ವೀಪ್ ಕಾರ್ಯಕ್ರಮದ ಚಟುವಟಿಕೆ ಕುರಿತು ಇಲಾಖಾ ಅಧಿಕಾರಿಗಳು ಆಲ್ಬಂ ತಯಾರಿಸಿ ತಮ್ಮ ಇಲಾಖೆಯಲ್ಲಿ ಸಂರಕ್ಷಿಸಿಟ್ಟುಕೊಳ್ಳಬೇಕು ಎಂದರು.


ಈ ವರ್ಷದ ಸ್ವೀಪ್ ಘೋಷವಾಕ್ಯ ‘ಚುನಾವಣಾ ಪರ್ವ ದೇಶದ ಗರ್ವ, ‘ಯಾವೊಬ್ಬ ಮತದಾರನೂ ಮತದಾನದಿಂದ ಹೊರಗುಳಿಯಬಾರದು’. ‘ಮತದಾನಕ್ಕಿಂತ ಇನ್ನೊಂದಿಲ್ಲ’, ‘ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಘೋಷವಾಕ್ಯದೊಂದಿಗೆ ಮತದಾರರ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.


ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ಕೇಂದ್ರ ಪ್ರಚಾರ ಇಲಾಖೆ ಉಪನಿರ್ದೇಶಕಿ ಶ್ರುತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net