ಎಲ್‌ಬಿಎಸ್ ಅಣೆಕಟ್ಟೆ ಎತ್ತರ ಹೆಚ್ಚಿಸಲು ಕ್ರಮ; ಡಿಸಿಎಂ ಡಿ.ಕೆ. ಶಿವಕುಮಾರ

DK IN KOLHAR
Published on

ವಿಜಯಪುರ: ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದ ಎತ್ತರ ಒಂದು ಮೀಟರ್‌ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕಾನೂನು ತಜ್ಞರ ಜೊತೆಗೆ ಸಮಾಲೋಚಿಸುವುದಾಗಿ ಉಪಮುಖ್ಯಮಂತ್ರಿಯೂ ಆಗಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.

ಕೊಲ್ಹಾರ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕೊಲ್ಹಾರ ಮೊಸರು ನಾಡೋತ್ಸವ-2025 ಹಾಗೂ ಅಂದಾಜು 100 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಯ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಈಗಾಗಲೇ ಸಚಿವ ಶಿವಾನಂದ ಪಾಟೀಲರು ಈ ಕುರಿತು ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಶೀಘ್ರದಲ್ಲಿಯೇ ತಜ್ಞರ ಅಭಿಪ್ರಾಯ ಪಡೆದು ಮುಂದಡಿ ಇಡಲಾಗುವುದು ಎಂದರು.

ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್‌ಗೆ ಎತ್ತರಿಸಬೇಕೆಂಬುದು ನಮ್ಮ ಸರ್ಕಾರದ ಆದ್ಯತೆ ಹಾಗೂ ಬದ್ಧತೆಯಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಭೆಯೂ ಕರೆಯಲಾಗಿದ್ದು, ಆಂದ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಭಾಗಿಯಾಗಿರಲಿಲ್ಲ. ಹೀಗಾಗಿ ಸಭೆ ಮುಂದೂಡಲ್ಪಟ್ಟಿದೆ. ಆದರೆ, ನಮ್ಮ ಕಾನೂನು ತಜ್ಞರಾದ ಮೋಹನ ಕಾತರಕಿ ಅವರು ಕೇವಲ 1 ಮೀಟರ್‌ಗೆ ಎತ್ತರಿಸಲು ಯಾವುದೇ ತೊಂದರೆ ಇಲ್ಲವೆಂದಿದ್ದಾರೆ. ಆ ನಿಟ್ಟಿನಲ್ಲಿ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮುಂದುವರಿದು ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆಯೂ, ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಜತೆಗೆ ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡಲಿಲ್ಲ. ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ ರೂ.5,300 ಕೋಟಿ ಅನುದಾನವನ್ನು ನೀಡಲಿಲ್ಲ. ನೀರಾವರಿ ಯೋಜನೆಗಳಿಗೆ ಸಹಾಯ ಮಾಡಲಿಲ್ಲ. ಆದರೂ ನಮ್ಮ ರಾಜ್ಯದ ಅಭಿವೃದ್ಧಿ ನಿಮ್ಮ ಸರ್ಕಾರದ ಗುರಿ. ನಮ್ಮ ಸರ್ಕಾರ 2 ವರ್ಷ ಪೂರೈಸಿದ ಸಂದರ್ಭದಲ್ಲಿ 1,11,111 ಕುಟುಂಬಗಳ ಜಮೀನಿಗೆ ಪಟ್ಟಾ ಖಾತೆ ನೀಡಿ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ಹೇಳಿದರು.

ಸರ್ಕಾರದ ಸಾಧನೆ

ವಿರೋಧ ಪಕ್ಷದವರು ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ನಾವು ಈ ಭಾಗದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ, ಬೀದರ್ ಜಿಲ್ಲೆಯ ಅಭಿವೃದ್ಧಿಗೆ ರೂ. 2025 ಕೋಟಿ ಮೊತ್ತದ ವಿವಿಧ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀವೆಲ್ಲರೂ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದ್ದೀರಿ. ನಿಮಗೆ ಸಹಾಯ ಮಾಡಲು ಗ್ಯಾರಂಟಿ ಯೋಜನೆ ತರಲಾಗಿದೆ. ಬಡ ಕುಟುಂಬದ ಮಹಿಳೆಗೆ 2 ಸಾವಿರ, 200 ಯೂನಿಟ್‌ವರೆಗೂ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, 10 ಕೆಜಿ ಅಕ್ಕಿ, ನಿರುದ್ಯೋಗ ಭತ್ಯೆ ನೀಡಿದ್ದೇವೆ. ಆ ಮೂಲಕ ಬಸವಣ್ಣನವರ ಮಾರ್ಗದರ್ಶನದಂತೆ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.

ಮಂಡ್ಯ ನಂತರ ಈ ಭಾಗದ ಜಿಲ್ಲೆಗಳು ಸಕ್ಕರೆ ನಾಡಾಗಿ ಮಾರ್ಪಟ್ಟಿವೆ. ಈ ಭಾಗದ ರೈತರ ಬದುಕು ಹಸನಾಗಿಸಲು ನಾವು ಬದ್ಧರಾಗಿದ್ದೇವೆ. ಈ ಭಾಗದಲ್ಲಿ ಕಾರ್ಖಾನೆಗಳು ಆರಂಭವಾಗಿ, ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಬರುವ ದಿನಗಳಲ್ಲಿ ಕೊಲ್ಹಾರ ಪಟ್ಟಣದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ವಾಗ್ದಾನ ಮಾಡಿದರು.

ನೀರು ಕೊಟ್ಟರೆ ಬಂಗಾರ ಬೆಳೆಯುತ್ತೇವೆ

ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಬಗೆ ಹರಿದು ಕೃಷ್ಣಾಕೊಳ್ಳದ ನೀರಾವರಿ ಯೋಜನೆ ಪೂರ್ಣಗೊಳ್ಳಲು ಇನ್ನೂ ಲಕ್ಷ ಕೋಟಿ ರೂಪಾಯಿಯಾದರೂ ಅನುದಾನ ಬೇಕು. ಅದಕ್ಕೂ ಮುನ್ನ ಆಲಮಟ್ಟಿ ಅಣೆಕಟ್ಟೆಯ ಎತ್ತರ ಕನಿಷ್ಠ 1 ಮೀಟರ್‌ಗೆ ಹೆಚ್ಚಿಸಿದರೆ ಜಿಲ್ಲೆಗೆ ಕನಿಷ್ಠ 30 ಟಿಎಂಸಿ ನೀರು ಸಿಗಲಿದೆ. ಇದರಿಂದ ಜಿಲ್ಲೆಯ ಪಾಲಿಗೆ ಹಂಚಿಕೆಯಾದ ನೀರಿನ ಪ್ರಮಾಣ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಉಪಮುಖ್ಯಮಂತ್ರಿಗಳಿಗೆ ತಿಳಿಸಿದರು.

ಜಿಲ್ಲೆಗೆ ಸಿಗಬೇಕಾದ 80 ಟಿಎಂಸಿ ಪೈಕಿ 40 ಟಿಎಂಸಿ ನೀರು ಕೊಟ್ಟರೆ ರಾಜ್ಯಕ್ಕೆ ಬೇಕಾದ ಎಲ್ಲ ದವಸ ಧಾನ್ಯ ಬೆಳೆದು ಪೂರೈಸುವ ಕೆಲಸ ಈ ಭಾಗದ ರೈತರು ಮಾಡಲಿದ್ದಾರೆ. ಸ್ವಲ್ಪ ನೀರು ಸಿಕ್ಕರೂ ನಮ್ಮ ರೈತರು ಬಂಗಾರವನ್ನೇ ಬೆಳೆಯುತ್ತಾರೆ. ಹೀಗಾಗಿ ಅಣೆಕಟ್ಟೆ ಎತ್ತರ ಹೆಚ್ಚಿಸಿ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ನೀರು ಕೊಟ್ಟ ಪುಣ್ಯ ಸಿಗಲಿದೆ ಎಂದರು.

ಕೇವಲ 200 ರೂಪಾಯಿ ದರಕ್ಕೆ ಈ ಭಾಗದ ರೈತರು ಜಮೀನು ಕಳೆದುಕೊಂಡಿದ್ದಾರೆ. ಇಂದು ಲಕ್ಷ ಲಕ್ಷ ಬೆಲೆ ಬಾಳುವ ಭೂಮಿಯಿಂದ ನಮ್ಮ ಭಾಗದ ರೈತರಿಗೆ ಯಾವುದೇ ರೀತಿ ಅನುಕೂಲವಾಗಿಲ್ಲ. ನೆರೆಯ ಜಿಲ್ಲೆಗಳಿಗೆ ಸಿಗಬೇಕಾದ ನೀರು ಸಿಗುತ್ತಿದೆ. ಆದರೆ, ಜಿಲ್ಲೆಯ ಜನರಿಗೆ ಸಿಗಬೇಕಾದ ಪಾಲು ಸಿಕ್ಕಿಲ್ಲ. ಪುನರ್ವಸತಿ-ಪುನರ್ ನಿರ್ಮಾಣಕ್ಕೆ ಇನ್ನೂ 400 ಕೋಟಿ ರೂಪಾಯಿ ಖರ್ಚು ಮಾಡಬೇಕಿದೆ. ಈ ಬಗ್ಗೆ ಕಾಳಜಿ ವಹಿಸಬೇಕು. ಮೂಲ ಸಂತ್ರಸ್ತರಿಗೆ ಪ್ಲಾಟ್ ಸಿಕ್ಕಿಲ್ಲ. ದುರುಪಯೋಗ ಪಡಿಸಿಕೊಂಡವರಿಗೆ ಸಿಕ್ಕಿದೆ. ಹೀಗಾಗಿ ಸಿಒಡಿ ತನಿಖೆ ನಡೆಯುತ್ತಿದೆ. ಆ ತನಿಖೆ ತ್ವರಿತವಾಗಿ ಪೂರ್ಣಗೊಳಿಸಿ ಮೂಲ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕೆಂದರು.

ಬಂಗಾರದ ಪುತ್ಥಳಿ ಸ್ಥಾಪನೆ

ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗಲೇ ಎರಡು ವರ್ಷ ಗತಿಸಿದೆ. ಇನ್ನುಳಿದ ಮೂರು ವರ್ಷಗಳ ಅವಧಿಯಲ್ಲಿ ಮೂರನೇ ಹಂತದ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ಆ ಮೂಲಕ 130 ಟಿಎಂಸಿ ನೀರು ಬಳಕೆ ಮಾಡಿ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸಮಗ್ರ ನೀರಾವರಿಗೆ ಶ್ರಮಿಸಬೇಕು. ಯೋಜನೆ ಪೂರ್ಣಗೊಂಡಿದ್ದೇ ಆದಲ್ಲಿ ಈ ಭಾಗದ ಜನ ಬಂಗಾರದ ಮೂರ್ತಿ ಸ್ಥಾಪಿಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನುದ್ದೇಶಿಸಿ ಹೇಳಿದರು.

ಪರಮ ಪೂಜ್ಯ ಪ್ರಭುಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪೂಜ್ಯ ಕಲ್ಲಿನಾಥ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಅಶೋಕ ಮನಗೂಳಿ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡ ಕಲ್ಲು ದೇಸಾಯಿ,  ಮನೋಹರ ಐನಾಪುರ, ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಸ್ವಾಗತಿಸಿದರು. ಬಂಜಾರಾ ಸಮುದಾಯದವರು ಬಂಜಾರಾ ಕಸೂತಿ ಬಟ್ಟೆಗಳನ್ನು ತೊಡಿಸಿ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ಡಿ.ಕೆ. ಶಿವಕುಮಾರ ಅವರನ್ನು ತೆರೆದ ವಾಹನದಲ್ಲಿ ಹೂ ಮಳೆ ಸುರಿಸಿ ಬೃಹತ್ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net