ರಾಮನಗುಡ್ಡೆ, ಹುಬ್ಬೆಹುಣಸೆ ಕೆರೆ ತುಂಬಿಸಲು ಕ್ರಮ

07 HANUR 2
ಹುಬ್ಬೆಹುಣಸೆ ಕೆರೆಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಒತ್ತುವರಿ ತೆರೆವು ಕಾರ್ಯವನ್ನು ಪರಿಶೀಲಿಸಿದರು. ವಿಜಯಕುಮಾರ್, ಮಾದಪ್ಪ, ಶ್ರೀನಿವಾಸ್, ಚಿನ್ನವೆಂಕಟ ಇತರರು ಇದ್ದರು.
Published on

ಹನೂರು: ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಕೆರೆಗೆ ಮುಂದಿನ ದಿನಗಳಲ್ಲಿ ನದಿ ಮೂಲದಿಂದ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ಹನೂರು ಸಮೀಪದ ಉದ್ದನೂರು ಬಳಿಯ ಹುಬ್ಬೆಹುಣಸೆ ಕೆರೆಗೆ ಭಾನುವಾರ ರೈತರು ಹಾಗೂ ಮುಖಂಡರೊಂದಿಗೆ ಭೇಟಿ ನೀಡಿ ಒತ್ತುವರಿ ತೆರವು ಕಾರ್ಯವನ್ನು ಪರಿಶೀಲಿಸಿ ಮಾತನಾಡಿದರು.

ಹುಬ್ಬೆಹುಣಸೆ ಹಾಗೂ ರಾಮನಗುಡ್ಡೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಸಮರ್ಪಕ ನೀರಾವರಿ ಸೌಕರ್ಯವಿಲ್ಲದ ಪರಿಣಾಮ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ಕೆರೆಗಳಿಂದ ನೀರಾವರಿ ಸೌಕರ್ಯವನ್ನು ಒದಗಿಸುವಂತೆ ಈ ಭಾಗದ ರೈತರು ಮನವಿ ಮಾಡಿದ್ದರು. ಈ ದೆಸೆಯಲ್ಲಿ ಕ್ರಮವಹಿಸಿದಾಗ ಈ 2 ಕೆರೆಯ ಆಸುಪಾಸಿನಲ್ಲಿ ಕೆಲವರು ಜಾಗವನ್ನು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂತು. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಭೂ ಮಾಪನ ಇಲಾಖೆಯ ಅಧಿಕಾರಿಗಳಿಂದ ಸರ್ವೇ ನಡೆಸಿ ಜಾಗವನ್ನು ತೆರವುಗೊಳಿಸಿ ಗಡಿಯನ್ನು ಗುರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಹೂಳನ್ನು ತೆಗೆಸುವುದರ ಜತೆಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಈ ಕಾರ್ಯಕ್ಕೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ರೈತರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ರೈತ ಸಂಘದ ಹನೂರು ಘಟಕಾಧ್ಯಕ್ಷ ಮಾದಪ್ಪ ಮಾತನಾಡಿ, ಎಂ.ಟಿ ದೊಡ್ಡಿ ಭಾಗದ ರೈತರಿಗೆ ನೀರಾವರಿ ಸೌಕರ್ಯವಿಲ್ಲದ ಪರಿಣಾಮ ತುಂಬ ತೊಂದರೆ ಎದುರಿಸುವಂತಾಗಿದೆ. ಆದ್ದರಿಂದ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯದ ಎಡದಂತೆ ನಾಲೆಯ ಮೂಲಕ ಹಳ್ಳಕ್ಕೆ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.

ರೈತ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ವಿನ್ಸೆಂಟ್, ನಂದೀಶ್, ಪ್ರಕಾಶ್, ಮುಖಂಡರಾದ ವಿಜಯ್‌ಕುಮಾರ್, ಸಿದ್ದರಾಜು, ಶ್ರೀನಿವಾಸ್, ವೆಂಕಟೇಶ್, ಚಿನ್ನವೆಂಕಟ, ಮಹದೇವ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net