

ಗುಂಡ್ಲುಪೇಟೆ: ಪ್ರಸಿದ್ಧ ಪ್ರವಾಸಿ ತಾಣವಾದ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತೆರೆದಿರುವ ಅಂಗಡಿಗಳ ಮಾಲೀಕರಿಗೆ ತಹಸೀಲ್ದಾರ್ ನೋಟಿಸ್ ನೀಡಿದ್ದು ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಟಿ.ರಮೇಶ್‌ಬಾಬು ತಿಳಿಸಿದ್ದಾರೆ.
ಕಳ್ಳಿಪುರ ಗ್ರಾಮದ ಸ.ನಂ.52ರ ಸರ್ಕಾರಿ ಜಮೀನಿನಲ್ಲಿ ಬರುವ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಗೇಟಿಗೆ ಹೊಂದಿಕೊಂಡಂತೆ ಸುಮಾರು 300 ಮೀಟರ್ ಅಂತರದವರೆಗೆ ರಸ್ತೆಯ ಬದಿಯಲ್ಲಿ ಹಂಗಳದ ಹೊಸಹಳ್ಳಿ, ಕುಣಗಹಳ್ಳಿ, ಕಳ್ಳಿಪುರ ಗ್ರಾಮದವರು ಶೀಟ್‌ಗಳಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳಿವೆ.
ಇವುಗಳನ್ನು ತೆರೆಯಲು ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಈ ಪ್ರದೇಶವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯಕ್ಕೆ ಹೊಂದಿಕೊಂಡಿದ್ದು ವ್ಯಾಪಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಅಲ್ಲದೆ ಅನಧಿಕೃತವಾಗಿ ಗಣ್ಯವ್ಯಕ್ತಿಗಳ ಛಾಯಾಚಿತ್ರಗಳನ್ನು ಹಾಕಿ ಸ್ಥಳವನ್ನು ಗುರುತಿಸಿಕೊಂಡು ರಸ್ತೆಯಲ್ಲಿ ವಾಹನಗಳು ಸಂಚರಿಸಲು ತೊಂದರೆ ಮಾಡುತ್ತಿದ್ದಾರೆ. ಹೀಗಾಗಿ ತೆರವುಗೊಳಿಸುವುದು ಅತ್ಯವಶ್ಯಕವಾಗಿರುವ ಹಿನ್ನೆಲೆಯಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಬರೆದ ಪತ್ರದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.