ಕಸಮುಕ್ತ ನಗರ ನಿರ್ಮಾಣಕ್ಕೆ ಕ್ರಮ

2
ನೆಲಮಂಗಲದ ಸೊಂಡೆಕೊಪ್ಪ ವೃತ್ತದ ಬಳಿ ಸೊಂಡೆಕೊಪ್ಪ ಮಾರ್ಗದ ತಾಲೂಕಿನ ಗಡಿವರೆಗಿನ ರಸ್ತೆಯನ್ನು ಚತುಷ್ಟಪಥ ಅಭಿವೃದ್ಧಿ ಕಾಮಗಾರಿಗೆ ಶ್ರೀಮಹಂತಸ್ವಾಮೀಜಿ, ಶ್ರೀಸಿದ್ದಲಿಂಗಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಎನ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಎಸ್.ರವಿ, ವಿಧಾನಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ಇತರರು ಇದ್ದರು.
Published on

ಕ್ಷೇತ್ರಕ್ಕೆ 78 ಕೋಟಿ ರೂಪಾಯಿ ಅನುದಾನ -ಶಾಸಕ ಎನ್.ಶ್ರೀನಿವಾಸ್ ಮಾಹಿತಿ

ನೆಲಮಂಗಲ : ಸಿಎಂ, ಡಿಸಿಎಂ ಜತೆಗೆ ಎಂಎಲ್ಸಿ ರವಿ ಅವರ ಸಹಕಾರದಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಸಹಾಯವಾಗಿದೆ. ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ನೀರಾವರಿ ನಿಗಮದಿಂದ 78 ಕೋಟಿ ರೂಪಾಯಿ ಅನುದಾನ ತರುತ್ತಿದ್ದು, ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ನಗರದ ಸೊಂಡೆಕೊಪ್ಪ ವೃತ್ತದ ಬಳಿ ಸೊಂಡೆಕೊಪ್ಪ ಮಾರ್ಗದ ತಾಲೂಕಿನ ಗಡಿವರೆಗಿನ ರಸ್ತೆಯನ್ನು ಚತುಷ್ಟಪಥವಾಗಿ ಮೇಲ್ದರ್ಜೆಗೇರಿಸುವ 17 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಟಿ.ಬೇಗೂರುನಿಂದ ತ್ಯಾಮಗೊಂಡ್ಲು ರಸ್ತೆ ಮೇಲ್ದರ್ಜೆಗೇರಿಸುವ 35 ಕೋಟಿ ವೆಚ್ಚದ ಕಾಮಗಾರಿ, 220 ಕೆವಿ ವಿದ್ಯುತ್ ಉಪಘಟಕ, ತಾಲೂಕಿನ 69 ಕೆರೆ ತುಂಬಿಸಲಾಗುವುದು, ನಗರದಲ್ಲಿ ಯುಜಿ ಕೇಬಲ್ ಅಳವಡಿಕೆ ಮಾಡಿಸುವುದರ ಜತೆಗೆ ಕಸಮುಕ್ತ ನಗರ ನಿರ್ಮಾಣದ ಸಿಹಿಸುದ್ದಿಯನ್ನು ನಗರದ ನಾಗರೀಕರಿಗೆ ತಿಳಿಸಿದರು. ಕಳೆದ ಒಂದೂವರೆ ವರ್ಷದಿಂದಲೂ ಕ್ಷೇತ್ರದಲ್ಲಿ ಅಭಿಯಾನದ ರೂಪದಲ್ಲಿ ಕೆಲಸ ಮಾಡಲಾಗುತ್ತಿದೆ. ಸಿಎಂ, ಡಿಸಿಎಂ ಅವರಿಂದ ಶಾಸಕರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಸದಸ್ಯ ವಾಸು, ಮಾಜಿ ಅಧ್ಯಕ್ಷ ಹೇಮಂತಕುಮಾರ್, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಸುಗ್ಗರಾಜು, ಸ್ಥಾಯಿಸಮಿತಿ ಅಧ್ಯಕ್ಷ ಸುನೀಲ್ ಮೂಡ್, ಸದಸ್ಯ ಕೆ.ಎಂ.ಶಿವಕುಮಾರ್, ನರಸಿಂಹಮೂರ್ತಿ, ಗಂಗಾಧರ್ ರಾವ್, ಸಿ.ಪ್ರದೀಪ್, ಎನ್.ಗಣೇಶ್, ಪುಷ್ಪಲತಾ, ಸುಧಾಕೃಷ್ಣಪ್ಪ, ಲೋಲಾಕ್ಷಿ ಗಂಗಾಧರ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ್ರು, ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜ ಉಪಸ್ಥಿತರಿದ್ದರು.

ಅಭಿವೃದ್ಧಿ ಕೆಲಸ ನೋಡಲಿ

ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಕ್ಷೇತ್ರದಲ್ಲಿ ಒಳಚರಂಡಿ, ಉತ್ತಮ ಆಸ್ಪತ್ರೆ, ಬಸ್ ನಿಲ್ದಾಣ, ಶಾಶ್ವತ ನೀರಿನ ವ್ಯವಸ್ಥೆ ಇಲ್ಲದೇ ಶಾಪಗ್ರಸ್ಥವಾಗಿದೆ. ಆದರೀಗ ಕ್ಷೇತ್ರದಿಂದ ಎನ್.ಶ್ರೀನಿವಾಸ್ ಎಂಬ ಬುದ್ದಿವಂತ ಯುವಕ ಆಯ್ಕೆಯಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಶಾಸಕರು ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿದ್ದು, ಬದಲಾವಣೆಯ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳುತ್ತಿರುವ ವಿರೋಧಿಗಳು ನೆಲಮಂಗಲಕ್ಕೆ ಬಂದು ನೋಡಲಿ ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ಹೇಳಿದರು.

ಮಠದ ರಸ್ತೆ ಆವರಣ ಅಭಿವೃದ್ಧಿ

ಸೊಂಡೆಕೊಪ್ಪ ಮಾರ್ಗದ ಚತುಷ್ಟಪಥ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮುನ್ನ ನಗರದ ಪವಾಡ ಶ್ರೀ ಬಸವಣ್ಣ ದೇವರಮಠದ ರಸ್ತೆ ಮತ್ತು ಆವರಣ ಅಭಿವೃದ್ಧಿಗೂ ಭೂಮಿಪೂಜೆ ನೆರವೇರಿಸಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರೇವಣಸಿದ್ಧಯ್ಯ, ತಾಲೂಕು ಅಧ್ಯಕ್ಷ ರಾಜಶೇಖರ್, ಮಾಜಿ ಅದ್ಯಕ್ಷ ಶಾಂತಕುಮಾರ್, ಮುಖಂಡ ದಯಾಶಂಕರ್, ಎಂ.ಜಿ.ಲೋಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net