ಕರ್ತವ್ಯದ ವೇಳೆ ಹೊರಗಡೆ ಮಾಡಿದರೆ ಕ್ರಮ

ಕರ್ತವ್ಯದ ವೇಳೆ ಹೊರಗಡೆ ಮಾಡಿದರೆ ಕ್ರಮ
Published on

ಹಾಸನ: ವೈದ್ಯರು ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೆ ಆಸ್ಪತ್ರೆಯಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದ ವೇಳೆಯಲ್ಲಿ ಹೊರಗಡೆ ಕೆಲಸ ಮಾಡುತ್ತಿರುವುದರ ಬಗ್ಗೆ ದೂರುಗಳು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಿಮ್ಸ್ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಸೂಚಿಸಿದರು.

ಹಿಮ್ಸ್ ಸಭಾಂಗಣದಲ್ಲಿ ಶನಿವಾರ ಹಾಸನ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು ಎಂದು ಸೂಚಿಸಿದರು.

ಕಾಮಗಾರಿ ಪೂರ್ಣಗೊಂಡಿರುವ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳಲು ತಿಳಿಸಿದ ಸಚಿವರು, ಬ್ಯಾಕ್‌ಲಾಗ್ ಹಾಗೂ 371 ಜೆ ಅಡಿ ಖಾಲಿ ಇರುವ ಹುದ್ದೆಗಳನ್ನು ಅನುಮೋದನೆ ಪಡೆದು ಭರ್ತಿಗೆ ಕ್ರಮ ವಹಿಸಿ. ಜತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯಕವಿರುವ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಬಳಕೆಗೆ ಬಾರದ ಆಂಬುಲೆನ್ಸ್ ನಿಷ್ಕ್ರಿಯಗೊಳಿಸಿ ಸಿಎಸ್‌ಆರ್ ಅಡಿಯಲ್ಲಿ ಅಗತ್ಯವಿರುವ ಆಂಬುಲೆನ್ಸ್ ಪಡೆದುಕೊಳ್ಳುವಂತೆ ಸೂಚಿಸಿದರು. ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಎ.ಬಿ.ಆರ್.ಕೆ ಯೋಜನೆಯಡಿ ಸೌಲಭ್ಯ ಪಡೆಯಲು ರೋಗಿಗಳ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇರುವುದಿಲ್ಲ, ಒಟಿಪಿ ಪಡೆಯಬೇಕಿರುತ್ತದೆ. ಇದರಿಂದ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಬೋಧನಾ ವಿಭಾಗಕ್ಕೆ 98 ಹೆಚ್ಚುವರಿ ಹುದ್ದೆ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಸಿಎಸ್‌ಆರ್ ಫಂಡ್ ನಲ್ಲಿ ಸಿಟಿ ಸ್ಕಾೃನಿಂಗ್ ನೀಡಲಾಗಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್, ವೈದ್ಯಕೀಯ ಅಧಿಕ್ಷಕ ಡಾ. ರಾಘವೇಂದ್ರ ಪ್ರಸಾದ್, ಡಾ.ರವಿಕುಮಾರ್, ಜಿಲ್ಲಾ ಶಸತ್ರಚಿಕಿತ್ಸಕ ಡಾ.ನಾಗಪ್ಪ, ಮುಖ್ಯ ಆಡಳಿತಾಧಿಕಾರಿ ರೇಖಾ ಇತರರು ಇದ್ದರು.

ನಂತರ ಸಚಿವರು ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವ ಗ್ರಂಥಾಲಯ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಿಟಿಟಿಸಿ ಕೇಂದ್ರಕ್ಕೆ ಭೇಟಿ, ಪರಿಶೀಲನೆ: ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ನಗರದ ಡೇರಿ ವೃತ್ತದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು. ಈ ವೇಳೆಯಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net