ವಸತಿ ನಿಲಯಗಳ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸದಿದ್ದರೆ ಕ್ರಮ

Action to be taken if results of hostel students do not improve
Published on

ಬ್ಯಾಡಗಿ: ಸರ್ಕಾರದ ಎಲ್ಲ ವಸತಿ ನಿಲಯಗಳ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆ ಕಾಣದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಎಚ್ಚರಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆಯ ವಿವಿಧ ಶಾಲೆಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಸಾಕಷ್ಟು ಅನುದಾನ ವ್ಯಯಿಸುತ್ತಿದೆ. ಸಿಬ್ಬಂದಿ ಸೇರಿದಂತೆ ವಿಶೇಷ ಶಿಕ್ಷಕರ ನೇಮಕ ಮಾಡಲಾಗಿದೆ. ಆದರೂ, ನಿಲಯದ ಮಕ್ಕಳು ಏಕೆ ಶೈಕ್ಷಣಿಕವಾಗಿ ಹಿಂದುಳಿದ್ದಾರೆ. ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಲು ಏಕೆ ವಿಫಲವಾಗಿದ್ದೀರಿ ಎಂದು ಪ್ರಶ್ನಿಸಿದ ಅವರು, ಈ ಕುರಿತು ಆಯಾ ನಿಲಯಗಳಲ್ಲಿ ಎಲ್ಲರೂ ರ್ಚಚಿಸಿ, 8ನೇ ತರಗತಿಯಿಂದಲೇ ಮಕ್ಕಳಿಗೆ ಶೈಕ್ಷಣಿಕ ಪೂರಕ ವಾತಾವರಣ ಕಲ್ಪಿಸಲು ಸೂಚಿಸಿದರು.

ತಾಲೂಕಿನ ವಿವಿಧ ಕೈಗಾರಿಕೆ, ಆಹಾರ ತಯಾರಿಕೆ, ಸಣ್ಣಪುಟ್ಟ ಘಟಕಗಳು ಸೇರಿದಂತೆ ವಿವಿಧೆಡೆ ಬಾಲ ಕಾರ್ವಿುಕರು ಕೆಲಸ ನಿರ್ವಹಿಸುವ ಕುರಿತು ಸಾಕಷ್ಟು ದೂರುಗಳಿವೆ. ಅಂತಹ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಗ್ಗೆ ದಾಖಲೆ ಕೊಡಿ. 2020ರಿಂದ 2025ರವರೆಗೂ 9 ಸಾವಿರಕ್ಕೂ ಹೆಚ್ಚು ಕಾರ್ವಿುಕರ ಮಕ್ಕಳಿಂದ ಸ್ಕಾಲರ್​ಶಿಪ್ ಅರ್ಜಿ ಸಲ್ಲಿಕೆಯಾಗಿದ್ದು, ಏಕೆ ಬಾಕಿ ಉಳಿದುಕೊಂಡಿವೆ. ಬಹುತೇಕ ಯೋಜನೆ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲವೆಂದು ಕಾರ್ವಿುಕರ ದೂರುತ್ತಿದ್ದಾರೆ. ತುರ್ತು ಅನಾರೋಗ್ಯದಿಂದ ಬಳಲುವವರಿಗೆ ನೆರವು ಸಿಗುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ. ಹೀಗಾದರೆ ಸರ್ಕಾರದ ಯೋಜನೆ ಜನರಿಗೆ ತಲುಪುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಗೆ ಕಾರ್ವಿುಕ ಅಧಿಕಾರಿ ಗೈರಾಗಿ, ತಮ್ಮ ಬದಲಿಗೆ ಕಂಪ್ಯೂಟರ್ ಆಪರೇಟರ್ ಕಳುಹಿಸಿದ್ದರು. ಪ್ರತಿ ಬಾರಿಯೂ ಕಾರ್ವಿುಕ ಇಲಾಖೆ ಮಾಹಿತಿ, ಪ್ರಗತಿ ದಾಖಲೆ ಸಭೆಗೆ ಲಭ್ಯವಾಗುತ್ತಿಲ್ಲ ಎಂದು ಚರ್ಚೆಯಾಯಿತು. ತಾಪಂ ಇಒ, ಎರಡು ದಿನಗಳಲ್ಲಿ ಮಾಹಿತಿ ಪೂರೈಸುವಂತೆ ಸೂಚಿಸಿದರು.

ವಿಜಯವಾಣಿ ವರದಿ ಚರ್ಚೆ: ತಾಲೂಕಿನ ಹಿರೇಹಳ್ಳಿ, ಬಡಮಲ್ಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹೈದರಾಬಾದ್ ಕಂಪನಿಯ ಮೆಣಸಿನಕಾಯಿ ಬೀಜಗಳಿಂದ ನಷ್ಟ ಅನುಭವಿಸಿದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಕುರಿತು ವಿಜಯವಾಣಿಯಲ್ಲಿ ಮೇ 4ರಂದು ‘ಮೆಣಸಿನಕಾಯಿ ಗಿಡಗಳಲ್ಲಿ ಕಾಣದ ಫಸಲು’ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟವಾಗಿದೆ. ಜಿಲ್ಲಾಧಿಕಾರಿಗಳು, ಶಾಸಕರ ಮಟ್ಟದಲ್ಲಿ ಚರ್ಚೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪುನಃ ಇಂತಹ ಘಟನೆ ಮರುಕಳಿಸದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಎಚ್ಚರಿಕೆ ವಹಿಸಬೇಕು. ಬೀಜ, ಗೊಬ್ಬರ ಮಾರಾಟ ದಾಸ್ತಾನು, ಕಂಪನಿ, ತಳಿ ಇತ್ಯಾದಿಗಳ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಡಾ.ರಂಗಸ್ವಾಮಿ ಸೂಚಿಸಿದರು.

ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ವ್ಯವಸ್ಥಾಪಕ ಪ್ರಕಾಶ ಹಿರೇಮಠ, ನರೇಗಾ ಸಂಯೋಜಕ ಪರಶುರಾಮ ಅಗಸನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net