ಅನುದಾನ ದುರ್ಬಳಕೆ ದೂರು ಬಂದರೆ ಕ್ರಮ

MDG SABHE
Published on

ಮುಂಡರಗಿ: ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ತಾಪಂ ಇಒ ವಿಶ್ವನಾಥ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕು ಮಟ್ಟದ ಎಸ್​ಸಿಎಸ್​ಪಿ ಮತ್ತು ಟಿಎಸ್​ಪಿ ಪ್ರಗತಿ ಪರಿಶೀಲನೆ ಸಭೆ ಜರುಗಿತು.

ಎಲ್ಲಾ ಅಧಿಕಾರಿಗಳಿಗೆ ಎಸ್​ಸಿಎಸ್​ಪಿ, ಟಿಎಸ್​ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡದ ಜನರಿಗಾಗಿ ಮಾತ್ರ ಬಳಕೆ ಮಾಡಬೇಕು. ಒಂದು ವೇಳೆ ಬೇರೆ ಕಡೆ ಅನುದಾನ ಬಳಕೆಯಾದ ಬಗ್ಗೆ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಒ ವಿಶ್ವನಾಥ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 24,737 ರೈತರು ಸೌಲಭ್ಯ ಪಡೆದಿದ್ದಾರೆ. ಬಿತ್ತನೆ ಬೀಜ ವಿತರಣೆ ಯೋಜನೆಯಡಿ ಒಟ್ಟು ಶೇ. 75ರಷ್ಟು ಸಹಾಯಧನ ನೀಡಲಾಗುವುದು. ಅದರಲ್ಲಿ ಪರಿಶಿಷ್ಟ ಜಾತಿಯ 2150 ರೈತರು, ಪರಿಶಿಷ್ಟ ಪಂಗಡದ 1,615 ರೈತರಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪ್ರೀಮಿಯಂ ತುಂಬಿದ್ದು, 303 ರೈತರಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೀ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ ಅಡಿ 50,000 ಬಿಡುಗಡೆಯಾಗಿದ್ದು, ಬಿಡುಗಡೆಯಾದ ಅನುದಾನವನ್ನು ಇನ್ನೂ ಖರ್ಚು ಭರಿಸಿಲ್ಲ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 42.47 ಲಕ್ಷ ನಿಗದಿಯಾಗಿದ್ದು, ಅದರಲ್ಲಿ 12.11 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ವಿಶ್ವನಾಥ ಅವರು, ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಖರ್ಚು ಭರಿಸಿಲ್ಲ ಅನ್ನುವುದರ ಬಗ್ಗೆ ವಿವರಣೆ ಕೇಳಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಅಧಿಕಾರಿಗಳು ಮಾತನಾಡಿ, ಹಮ್ಮಿಗಿ, ಸಿಂಗಟಾಲೂರು ಮುಂಡವಾಡ ಗ್ರಾಮದ ಎಸ್​ಸಿ ಕಾಲನಿಯಲ್ಲಿ ಹೈಮಾಸ್ಟ್ ದೀಪ ಅಳವಡಿಸಿರುವುದರ ಬಗ್ಗೆ ಭೌತಿಕವಾಗಿ ಕಾಮಗಾರಿ ಮುಗಿದಿದೆ ಎಂದರು. ಹಮ್ಮಿಗಿ, ಸಿಂಗಟಾಲೂರು ಕಾಮಗಾರಿ ಪ್ರಾರಂಭ ಆಗಿಲ್ಲ, ಮುಂಡವಾಡದಲ್ಲಿ ಹೈಮಾಸ್ಟ್ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಇಒ ತಿಳಿಸಿದರು. ಇನ್ನೂ ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆಯೂ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಉಪವಿಭಾಗದ ಅಧಿಕಾರಿ ಮಾತನಾಡಿ, ಡಂಬಳ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕಾಮಗಾರಿ ಮುಕ್ತಾಯಗೊಂಡಿದ್ದು, ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ. ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಯು ಪೇಂಟಿಂಗ್ ಹಂತದಲ್ಲಿದೆ ಎಂದು ತಿಳಿಸಿದರು. ಆದಷ್ಟು ಬೇಗನೆ ಮುಕ್ತಾಯಗೊಳಿಸುವಂತೆ ಇಒ ಸೂಚಿಸಿದರು.

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಜು. 14ರಂದು ಕಟ್ಟಡ ಉದ್ಘಾಟನೆ ಇದ್ದು, ನಿಲಯದ ಕಾಂಪೌಂಡ್ ಮುಕ್ತಾಯಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾಂವಿ ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net