

ಅರಕಲಗೂಡು: ಬಡವರ ಹಸಿವು ನೀಗಿಸುವ ಸಲುವಾಗಿ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆ ಜಿ ಅಕ್ಕಿ ನೀಡುತ್ತಿದ್ದು, ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.ಶ್ರೀಧರ್‌ಗೌಡ ಹೇಳಿದರು.
ತಾಲೂಕಿನ ಮಲ್ಲಿಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ಗುರುವಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆಯುತ್ತಿದೆ. ಫೆಬ್ರವರಿ ತಿಂಗಳ 5 ಕೆ.ಜಿ. ಅಕ್ಕಿಯನ್ನು ಸೇರಿಸಿ ಈ ತಿಂಗಳು 15 ಕೆ.ಜಿ. ವಿತರಿಸಲಾಗುತ್ತಿದೆ. ಉಚಿತ ಪಡಿತರ ಪಡೆಯಲು ಪಡಿತರದಾರರು ಹಣ ನೀಡುವಂತಿಲ್ಲ. ಸೊಸೈಟಿಗಳಲ್ಲಿ ಹಣ ವಸೂಲಿಗೆ ಪೀಡಿಸಿದರೆ ನನ್ನ ಗಮನಕ್ಕೆ ತರಬೇಕು. ಒಂದೆರಡು ಕೆಜಿ ಅಕ್ಕಿ ಕಡಿಮೆ ವಿತರಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಬಿ.ಸಿ. ರಾಜೇಶ್, ಧರ್ಮ, ಸತ್ಯರಾಜ್, ವೀಣಾ, ಅರಕಲಗೂಡು ನಗರ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಕೆಡಿಪಿ ಸದಸ್ಯ ಸುರೇಶ್ ಇತರರು ಇದ್ದರು.