ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಕ್ರಮ

gan (9)
Published on

ಕುಂದಾಪುರ: ಪಾಕಿರ್ಂಗ್ ವ್ಯವಸ್ಥೆ ಇದ್ದಾಗ ಮಾತ್ರ ಪೊಲೀಸರಿಗೆ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ. ಕೆಲವು ಕಡೆಗಳಲ್ಲಿ ರಸ್ತೆಯ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆಯಿದೆ. ಇದನ್ನು ಪಟ್ಟಣದ ಇನ್ನೂ ಕೆಲವು ಕಡೆ ಮಾಡಬಹುದು. ಕಟ್ಟಡ ನಿರ್ಮಿಸಿ ವಾಹನ ಪಾರ್ಕಿಂಗ್ ಇಲ್ಲದಿದ್ದರೆ ವ್ಯರ್ಥ. ರಸ್ತೆ ಬದಿ ಮಾರ್ಜಿನ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಪುರಸಭೆ ವತಿಯಿಂದ ಮಾಡಿಕೊಡಿ. ಪೇಯ್ಡ ಪಾರ್ಕಿಂಗ್‌ಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕುಂದಾಪುರದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಹನಗಳ ಸುರಕ್ಷತೆಗೆ ಸಿಸಿ ಕ್ಯಾಮರಾ ಅಳವಡಿಕೆ, ಫ್ಲೈಓವರ್ ಅಡಿ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಕೆಲವು ನಿಬಂಧನೆಗಳನ್ನು ಹಾಕಬಹುದು. ಗಜೆಟ್ ನೋಟಿಫಿಕೇಶನ್‌ಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿ. ರಸ್ತೆಯಲ್ಲೇ ವಾಹನ ನಿಲ್ಲಿಸಿದರೆ ಪೊಲೀಸರು ಕೇಸು ಹಾಕಲಿ. ಆಗ ಪಾರ್ಕಿಂಗ್ ಇರುವಲ್ಲಿ ನಿಲ್ಲಿಸುತ್ತಾರೆ ಎಂದು ಶಾಸಕರು ಹೇಳಿದರು.

ಫ್ಲೈಓವರ್ ಕೆಳಗೆ ಪಾರ್ಕಿಂಗ್ ಮಾಡಿ

ಫ್ಲೈಓವರ್ ಕೆಳಗೆ ವ್ಯವಸ್ಥಿತ ಪಾರ್ಕಿಂಗ್ ಮಾಡುವ ಉದ್ದೇಶದಿಂದಲೇ ಲಯನ್ಸ್ ಕ್ಲಬ್ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಸುಂದರೀಕರಣ ಮಾಡಿಕೊಡಲಾಗಿದೆ. ನೂರಾರು ದ್ವಿಚಕ್ರ, ನಾಲ್ಕುಚಕ್ರದ ವಾಹನಗಳು ನಿಲ್ಲುವಷ್ಟು ಸ್ಥಳಾವಕಾಶ ಇಲ್ಲಿದೆ. ಪುರಸಭೆಯಿಂದ ಇಲ್ಲಿ ಪಾಕಿರ್ಂಗ್ ಮಾಡುವುದಾದರೆ ವಾಹನ ಹತ್ತಿ ಇಳಿಯಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿಕೊಡಲಾಗುವುದು. ನಗರದ ದೊಡ್ಡ ಮಟ್ಟದ ಸಮಸ್ಯೆ ನಿವಾರಣೆಯಾಗಲಿದೆ ಎಂದು ಲಯನ್ಸ್ ಕ್ಲಬ್‌ನ ರಮಾನಂದ ಕೆ.ಹೇಳಿದರು.

ಸದಸ್ಯರಾದ ಪ್ರಭಾವತಿ, ಶ್ರೀಧರ ಶೇರೆಗಾರ್, ಅಬ್ಬು ಮಹಮ್ಮದ್, ದೇವಕಿ ಸಣ್ಣಯ್ಯ, ಸಂತೋಷ್ ಕುಮಾರ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಅಶೋಕ್ ಸುವರ್ಣ ಸಲಹೆ ಸೂಚನೆಗಳನ್ನು ನೀಡಿದರು. ಪೇಯ್ಡ ಪಾರ್ಕಿಂಗ್ ಮಾಡಿ: ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾತನಾಡಿ, ಉಚಿತ ನಿಲುಗಡೆಗೆ ಅವಕಾಶ ಮಾಡಿಕೊಟ್ಟಲ್ಲಿ ದಿನಗಟ್ಟಲೆ ವಾಹನ ನಿಲ್ಲಿಸಿ ಹೋಗುವವರಿದ್ದಾರೆ. ಕೆಟ್ಟು ಹೋದ ವಾಹನಗಳನ್ನು ವಾರಗಟ್ಟಲೇ ಇಟ್ಟು ಹೋಗುತ್ತಾರೆ. ಇದರಿಂದ ಶುಚಿತ್ವ, ನಿರ್ವಹಣೆ ಸೇರಿದಂತೆ ಅನೇಕ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಹಣ ಪಾವತಿಸುವ ಪಾರ್ಕಿಂಗ್ ಉತ್ತಮ ಎಂದರು.

ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಹಣ ಪಾವತಿಸಿ ವ್ಯವಸ್ಥಿತ ರೀತಿಯ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡುವ ಶಾಸಕರ ಸಲಹೆಗೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡಲಾಯಿತು. ಕುಂದಾಪುರ ಸಂಚಾರ ಠಾಣೆ ಎಸ್‌ಐ ನೂತನ್, ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಮುಖ್ಯಾಧಿಕಾರಿ ಆನಂದ್ ಜೆ., ಲಯನ್ಸ್ ಕ್ಲಬ್‌ನ ಡಾ.ರಮೇಶ್ ಶೆಟ್ಟಿ, ಅಶೋಕ್ ಬೆಟ್ಟಿನ್, ಸುಧಾಕರ ಶೆಟ್ಟಿ ಹುಂತ್ರಿಕೆ, ಪ್ರಜ್ನೇಶ್ ಪ್ರಭು, ರೋಹಿಣಿ ಉದಯ ಕುಮಾರ್ ಮೊದಲಾದವರು ಇದ್ದರು.

ನಗರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಕುರಿತು ವಿಜಯವಾಣಿ ಅನೇಕ ಸರಣಿ ವರದಿಗಳನ್ನು ಮಾಡಿ ಗಮನ ಸೆಳೆದಿತ್ತು.

ಅನೇಕ ಬಾರಿ ಸರ್ವೆ

ಪಾರ್ಕಿಂಗ್‌ಗಾಗಿ ಅನೇಕ ಬಾರಿ ಸರ್ವೆ ಮಾಡಲಾಗಿದೆ. ವಸಂತಿ ಸಾರಂಗ, ವೀಣಾ ಭಾಸ್ಕರ ಅಧ್ಯಕ್ಷರಾಗಿದ್ದಲೂ ಆಗಿದೆ. ಆದರೆ ಇನ್ನೂ ಅನುಷ್ಠಾನವಾಗಿಲ್ಲ. ಸಭೆಗಳಲ್ಲಿ ಕೈಗೊಳ್ಳುವ ಯಾವ ನಿರ್ಣಯಗಳೂ ಕಾರ್ಯರೂಪಕ್ಕೆ ಬರುದಿಲ್ಲ. ಈಗ ಶಾಸಕರು ಮುತುವರ್ಜಿ ವಹಿಸಿದ್ದು ಇನ್ನಾದರೂ ಬರಲಿ. ಪಾರ್ಕಿಂಗ್ ವ್ಯವಸ್ಥೆ ಶೇ.100 ಸರಿಯಾಗಬೇಕು ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಹೇಳಿದರು.

ಕಾಲೇಜು ರಸ್ತೆಯಲ್ಲಿ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿದ್ದಾರೆ. ಒಂದೇ ಬದಿ ಪಾಕಿರ್ಂಗ್‌ಗೆ ಅವಕಾಶ ನೀಡುವುದು ಸೂಕ್ತ ಜತೆಗೆ, ನಗರದಲ್ಲಿ ಪಾಕಿರ್ಂಗ್ ಕುರಿತು ಪುರಸಭೆಯ ಅನೇಕ ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗಿ ನಿರ್ಣಯ ಆಗಿದ್ದರೂ ಅನುಷ್ಠಾನವಾಗಿಲ್ಲ. ನಗರದಲ್ಲಿ ವ್ಯವಸ್ಥಿತ ಪಾಕಿರ್ಂಗ್ ಬೇಕು. ಗಿರೀಶ್ ಜಿ.ಕೆ., ಪುರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net