

ಧಾರವಾಡ: ಅತಿಯಾದ ಮಳೆಯಿಂದ ಹಾನಿಗೊಳಗಾದ ಸೇತುವೆ, ರಸ್ತೆಗಳ ದುರಸ್ಥಿಗೆ ಆಯಾ ಇಲಾಖೆಗೆ ಸೂಚಿಸಲಾಗಿದೆ. ಇನ್ನೀತರ ಅತಿವೃಷ್ಠಿ ತುರ್ತು ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಲು ಪ್ರತಿ ತಾಲೂಕಿಗೆ 50 ಲಕ್ಷ ರೂ.ಗಳನ್ನು ತಹಸೀಲ್ದಾರ್ ಪಿಡಿ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಗುರುವಾರ ಅಳ್ನಾವರ ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಅಳ್ನಾವರ ತಾಲೂಕಿನ ಸಾರ್ವಜನಿಕರಿಂದ ದೂರು, ಅಹವಾಲುಗಳನ್ನು ಸ್ವೀಕರಿಸಿ, ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮಿಕ್ಷೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳು ಮತ್ತು ಜಾನುವಾರು ಪ್ರಾಣಹಾನಿಗಳಿಗೆ ಪರಿಹಾರ ನೀಡಲು ಕ್ರಮ ಕೈಕೊಳ್ಳಲಾಗುವುದು. ಪ್ರಕೃತಿ ವಿಕೋಪದಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಸೀಲ್ದಾರ ಕಚೇರಿಯಲ್ಲಿ ತುರ್ತು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.
ಸಾರಿಗೆ ಅವ್ಯವಸ್ಥೆಯ ಬಗ್ಗೆ ಕಿವಡೆಬೈಲ ಮತ್ತು ದೊಪೆನಟ್ಟಿ ಗ್ರಾಮಸ್ತರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಶಾಲಾ ಸಮಯಕ್ಕೆ ನಿಯಮಿತವಾಗಿ ಬಸ್ಸುಗಳನ್ನು ಓಡಿಸಲು ಘಟಕ ವ್ಯವಸ್ಥಾಪಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ಸಾರಿಗೆ ಸಮಸ್ಯೆ ಮುಂದುವರೆದರೆ ಗಮನಕ್ಕೆ ತರಲು ಗ್ರಾಮಸ್ತರಿಗೆ ತಿಳಿಸಿದರು.
ಪಟ್ಟಣದಲ್ಲಿ ಹೆಚ್ಚಾಗಿರುವ ಬಿದಿ ನಾಯಿಗಳ ಸಮಸ್ಯೆ, ಅರವಟಗಿಯಲ್ಲಿ ಬಸ್ ತಂಗುದಾಣ ನಿರ್ಮಾಣ, ವಸತಿ ಯೋಜನೆಯಡಿ ನಿರ್ಮಿಸಿಕೊಂಡ ಮನೆಗೆ ಅನುದಾನ ಬಿಡುಗಡೆಯಾಗದಿರುವದು, ಬೆಣಚಿ-ಮುತ್ತಲಮುರಿ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ, ಸರಕಾರಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ತೆರವುಗೊಳಿಸುವದು, ಅರವಟಗಿ-ಡೋರಿ-ಬೆಣಚಿ-ಅಳ್ನಾವರ ರಸ್ತೆಯ ಅಗಲೀಕರಣ ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸಿ, ಸಮಸ್ಯೆಗಳನ್ನು ಪರಿಹರಿಸಲು ಅವರು ಸೂಚನೆ ನೀಡಿದರು.
ಅಳ್ನಾವರ ಪಟ್ಟಣದಲ್ಲಿರುವ ಸರ್ಕಾರಿ ಶಾಲಾ ಮೈದಾನವು ಅನೈರ್ಮಲ್ಯದಿಂದ ಕೂಡಿದ್ದು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೀಘ್ರ ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸ್ಥಳಿಯ ಮುಖಂಡ ಪ್ರವೀಣ ಪವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕು ಮಟ್ಟದ ಕ್ರೀಡಾಂಗಣ ಸುಧಾರಣೆ, ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆಯ ಅಭಿವೃದ್ಧಿಯ ಬಗ್ಗೆ ಪುಂಡಲೀಕ ಪಾರ್ದಿ ಮತ್ತಿತರರು ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಇ-ಪೌತಿ ಆಂದೋಲನ ಕೈಕೊಳ್ಳಲಾಗಿದ್ದು, ಗ್ರಾಮ ಆಡಳಿತ ಅಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ಸೂಕ್ತ ದಾಖಲೆ ಕ್ರೋಡಿಕರಿಸಿಕೊಂಡು ಜಮೀನುಗಳ ಇ-ಪೌತಿ ಖಾತೆ ಬದಲಾವಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಅವುಗಳ ಪೈಕಿ ಹುಬ್ಬಳ್ಳಿ ಮತ್ತು ಅಳ್ನಾವರ ತಾಲೂಕಿನ ದಾಖಲಾತಿಗಳ ಡಿಜಟಲೀಕರಣ ಪೂರ್ಣಗೊಂಡಿದ್ದು, ಇನ್ನುಳಿದ ತಾಲೂಕುಗಳ ಕಂಪ್ಯೂಟರೀಕರಣ ಕಾರ್ಯ ಪ್ರಗತಿಯಲ್ಲಿದೆ. ಜನರು ಕಚೇರಿಗಳಿಗೆ ಅಲೆಯುವದನ್ನು ತಪ್ಪಿಸಲು ಕಂದಾಯ ದಾಖಲೆಗಳನ್ನು ಪಡೆಯಲು ಸರಳೀಕರಣ ಮಾಡಲಾಗಿದ್ದು, ಗಣಕೀರಣ ವ್ಯವಸ್ಥೆಯಡಿ ಸಾರ್ವಜನಿಕರೇ ನೇರವಾಗಿ ಆನಲೈನ್ ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಅಳ್ನಾವರ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ತಾಲೂಕಾ ಪಂಚಾಯತ ಇಓ ಪ್ರಶಾಂತ ತುರಕಾಣಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಕೆ.ಎನ್.ತನುಜಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್, ಹಿರಿಯ ಕಾರ್ಮಿಕ ನಿರೀಕ್ಷಕಿ ಶಿಂದಿಕುರಬೇಟ್ಟ, ಸಮಾಜ ಕಲ್ಯಾಣ ಇಲಾಖೆಯ ಮಿನಾಕ್ಷಿ ಕುಂಚನೂರ, ಆರ್.ಎಫ್.ಒ ಶಕುಂತಲಾ, ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅಣಗೌಡರ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.