ವಿಸಿ ನಾಲೆಗೆ ಕಂಟಕವಾದ ಕಲ್ಲುಸ್ಫೋಟ ತಡೆಗೆ ಕ್ರಮ

SRP_08-02jpj
ಚೆನ್ನನಕೆರೆ ವ್ಯಾಪ್ತಿಯ ಬಳಿ ಹಾದು ಹೋಗಿರುವ 1.3 ಕಿಮಿ ಉದ್ದದ ವಿ.ಸಿ.ಸಂಪರ್ಕ ನಾಲೆ ಸಮೀಪದ ಅರಣ್ಯ ಪ್ರದೇಶದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಪುಷ್ಪಾ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ವಾಸುದೇವ್, ಮಂಜೇಶ್ ಗೌಡ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಚೆನ್ನನಕೆರೆ ಮತ್ತು ಆಲಗೂಡು ಗ್ರಾಮಗಳ ನಡುವಿನ ವಿ.ಸಿ.ಸಂಪರ್ಕ ಸುರಂಗ ನಾಲೆ ಸಮೀಪದ ಅಕ್ರಮ ಕಲ್ಲುಕ್ವಾರಿಗಳಲ್ಲಿನ ಸ್ಫೋಟಕವು ನಾಲೆಗೆ ಕಂಟಕವಾಗಿದ್ದು, ಈ ಬಗ್ಗೆ ಟಾಸ್ಕ್ ಪೋರ್ಸ್ ತಕ್ಷಣ ಕ್ರಮ ಜರುಗಿಸಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಪುಷ್ಪಾ ಹೇಳಿದರು.

ತಾಲೂಕಿನ ಚೆನ್ನನಕೆರೆ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬುಧವಾರ ಕಾವೇರಿ ನಿಗಮ ನೀರಾವರಿ(ಮೈಸೂರು ವಿಭಾಗ) ಕಾರ್ಯಪಾಲಕ ಇಂಜಿನಿಯರ್ ವಾಸುದೇವ್ ಅವರ ದೂರಿನ ಅನ್ವಯ ನೀರಾವರಿ ನಿಗಮ, ಕಂದಾಯ ಇಲಾಖೆ, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿದರು.

ವಿ.ಸಿ.ಸಂಪರ್ಕ ನಾಲೆಯ ಸುರಂಗ ನಾಲೆ ಅಕ್ಕ-ಪಕ್ಕದಲ್ಲಿ ಬೃಹತ್ ಕಲ್ಲು ಕ್ವಾರಿಗಳು ನಡೆಯುತ್ತಿರುವುದು ಜತೆಗೆ ಸಮೀಪದಲ್ಲೇ ಕ್ರಷರ್‌ಗಳ ಘಟಕಗಳು ಇರುವುದನ್ನು ಖುದ್ದು ಪರಿಶೀಲಿಸಲಾಗಿದೆ. ತಾಲೂಕಿನಲ್ಲಿ ಪ್ರಸ್ತುತ 40 ಕ್ರಷರ್‌ಗಳು ಹಾಗೂ 23 ಕ್ವಾರಿಗಳು ಮಾತ್ರ ಅಧಿಕೃತವಾಗಿವೆ. ಆದರೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಬಳಿ ಇರುವ ದಾಖಲೆಗಳ ಪರಿಶೀಲಿಸಿ ಕಾನೂನಿನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕ್ವಾರಿಗಳಲ್ಲಿ ಅಕ್ರಮ ಬ್ಲಾಸ್ಟಿಂಗ್ ಹಾಗೂ ರಿಗ್ ಬೋರ್ ನಡೆಸುತ್ತಿರುವವರ ವಿರುದ್ಧವೂ ಕ್ರಮ ಜರುಗಿಸುವಂತೆ ಪೋಲೀಸ್ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದರು.

ಬನ್ನೂರು ವ್ಯಾಪ್ತಿಯ ಕಾ.ನಿ.ಎಕ್ಸಿಕ್ಯುಟೀವ್ ಇಂಜಿನಿಯರ್ ವಾಸುದೇವ್ ಮಾತನಾಡಿ, ಈ ಭಾಗದಲ್ಲಿ ಸುಮಾರು 1.3 ಕಿ.ಮೀ ದೂರದ ಸುರಂಗದ ಮೂಲಕವೇ ಹಾದು ಹೋಗುವ ವಿಸಿ ಸಂಪರ್ಕ ನಾಲೆಯು ಸುಮಾರು 70 ಸಾವಿರ ಎಕರೆ ಪ್ರದೇಶದ ಜಮೀನುಗಳ ಕೃಷಿ ಚಟುವಟಿಕೆಗಳಿಗೆ ನೀರುಣಿಸುವ ಮೂಲ ಆಧಾರವಾಗಿದೆ. ಇಲ್ಲಿನ ಕಲ್ಲು ಕ್ವಾರಿ ಮತ್ತು ಕ್ರಷರ್‌ಗಳಲ್ಲಿ ನಡೆಯುತ್ತಿರುವ ಬೃಹತ್ ಸ್ಫೋಟದಿಂದಾಗಿ ಸುರಂಗ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿದ್ದು, ನಾಲೆಯ ರಕ್ಷಣೆಗಾಗಿ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾತನಾಡಿ, ಇಲ್ಲಿನ ಪ್ರಭಾವಿ ಗಣಿ ಉದ್ಯಮಿಗಳು ಹಾಗೂ ರಾಜಕೀಯ ನಾಯಕರುಗಳ ಹಿಂಬಾಲಕರು ಸಾಕಷ್ಟು ಕ್ರಷರ್‌ಗಳನ್ನು ಹೊಂದಿದ್ದು, ಅರಣ್ಯ ಭೂಮಿಯಲ್ಲೇ ಅಕ್ರಮ ಕಲ್ಲು ಕ್ವಾರಿಗಳನ್ನು ನಡೆಸುತ್ತಿದ್ದಾರೆ. ಜತೆಗೆ ಬೃಹತ್ ಸ್ಫೋಟಕ ಬಳಸಲಾಗುತ್ತಿದೆ. ರಿಗ್‌ಬೋರ್ ಮೂಲಕ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಸುರಂಗಕ್ಕೆ ಕಂಟಕವಾಗಿವೆ. ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ನಾಲೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಹೋರಾಟಗಾರರಾದ ಗಂಜಾಂ ರವಿಚಂದ್ರ, ಕಾಳೇನಹಳ್ಳಿ ಮಹೇಶ್, ಕೋಡಿಶೆಟ್ಟಿಪುರ ತೇಜಸ್, ಅಲ್ಲಾಪಟ್ಟಣ ಸಿದ್ದೇಗೌಡ ಸೇರಿದಂತೆ ಗಣಿ ಮತ್ತು ಭೂ ಇಲಾಖೆಯ ತಾಲೂಕು ಅಧಿಕಾರಿ ಸುಬ್ರಮಣ್ಯ, ಮಡಿಆರ್‌ಎಫ್‌ಒ ನಾಗರಾಜು, ಕಂದಾಯ ಇಲಾಖೆಯ ನೌಕರರಾದ ಶಂಕರೇಗೌಡ, ರಮೇಶ್ ಹಾಗೂ ಅರಕೆರೆ ಠಾಣೆ ಪೊಲೀಸರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net