

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಅಪ್ರಾಪ್ತೆಯನ್ನು ವರಿಸಿದ್ದ ಗ್ರಾಮ ಪಂಚಾಯಿತಿ ಅಧ್ಯನ ವಿರುದ್ಧ ಯಮಕನಮರಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಕ್ರಮವಹಿಸಿದ್ದಾರೆ.
2023ರ ನವೆಂಬರ್ 5ರಂದು ಅಪ್ರಾಪ್ತೆ ಜತೆ ಭೀಮಶಿ ಕಳ್ಳಿಮನಿ ವಿವಾಹವಾಗಿದ್ದ ಕುರಿತು ಆರೋಪ ಕೇಳಿಬಂದಿತ್ತು. ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಡಾ.ಪ್ರವಿಣ ನೇತೃತ್ವದ ತಂಡ ಬಸಾಪುರಕ್ಕೆ 4 ಬಾರಿ ಭೇಟಿ ನೀಡಿದ್ದರೂ ಬಾಲಕಿಯನ್ನು ಪತ್ತೆಹಚ್ಚಲು ವಿಫಲವಾಗಿತ್ತು. ಆರೋಪಿ ಭೀಮಶಿ, ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಪತ್ನಿ ಅಪ್ರಾಪ್ತಳಲ್ಲ ಎಂಬುದಾಗಿ ನಕಲಿ ದಾಖಲೆ ಬಿಡುಗಡೆ ಮಾಡಿದ್ದ. ಬಳಿಕ ಅಧಿಕಾರಿಗಳು ಬಾಲಕಿಯ ಶಾಲಾ ವರ್ಗಾವಣೆ ಪ್ರಮಾಣಪತ್ರದ ಜತೆಗೆ ಹೊಸ ಜನನ ಪ್ರಮಾಣಪತ್ರ ಹೋಲಿಕೆ ಮಾಡಿದಾಗ ಬಾಲ್ಯವಿವಾಹ ಆಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.