

- ಅವಿನ್ ಶೆಟ್ಟಿ ಉಡುಪಿ
ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರಿಗೆ ಎರಡು ತಿಂಗಳಿನಿಂದ ಪೊಲೀಸರು ಶಾಕ್ ನೀಡುತ್ತಿದ್ದಾರೆ. ಮುಖ್ಯವಾಗಿ ನಗರದಲ್ಲಿ ಬುಲೆಟ್ ಬೈಕ್‌ಗಳ ಕರ್ಕಶ ಶಬ್ದಕ್ಕೆ ಸಂಚಾರ ಪೊಲೀಸರು ಇತಿಶ್ರೀ ಹಾಡಿದ್ದಾರೆ.
ಬಹುತೇಕ ಯುವಕರು ಪ್ರತಿಷ್ಠೆ ಮತ್ತು ಕ್ರೇಜ್‌ಗಾಗಿ 3ರಿಂದ 10 ಸಾವಿರ ರೂ. ಖರ್ಚು ಮಾಡಿ ಹೆಚ್ಚು ಶಬ್ಧ, ಕರ್ಕಶದಿಂದ ಕೂಡಿರುವ ಸೈಲೆನ್ಸರ್ ಅಳವಡಿಸಿಕೊಳ್ಳುತ್ತಿದ್ದರು. ಇದರಿಂದ ಬೈಕ್‌ಗಳ ಸಂಚಾರ ಸಂದರ್ಭ ಮಿತಿಮೀರಿದ ಶಬ್ಧ ಕೇಳಿಬರುತ್ತಿದ್ದವು. ಜನ ಈ ಬಗ್ಗೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಗರ ಸಂಚಾರ ಠಾಣೆ ಉಪ ಪೊಲೀಸ್ ನಿರೀಕ್ಷಕ ಅಬ್ದುಲ್ ಖಾದರ್ ಬುಲೆಟ್ ಬೈಕ್ ಕರ್ಕಶ ಸೌಂಡ್ ವಿರುದ್ಧ್ದ ಸಮರ ಸಾರಿದ್ದಾರೆ. ಎರಡು ತಿಂಗಳಲ್ಲಿ ಕೆಟ್ಟ ಶಬ್ಧ ಹೊರಡಿಸುತ್ತಿದ್ದ 111 ಬುಲೆಟ್ ಬೈಕ್‌ಗಳ ಸೈಲೆನ್ಸರ್ ಕಿತ್ತೆಸೆದು ದಂಡ ವಿಧಿಸಿದ್ದಾರೆ.
ಸವಾರರಿಗೆ ದಂಡ ಬಿಸಿ: ನಗರ ಸಂಚಾರ ಠಾಣೆಯಲ್ಲಿ ಎರಡು ತಿಂಗಳಲ್ಲಿ ಕರ್ಕಶ ಶಬ್ದಕ್ಕೆ 55,500 ರೂ. ದಂಡ ವಸೂಲಿ ಮಾಡಲಾಗಿದೆ. ವಿರುದ್ಧ ದಿಕ್ಕಿನಲ್ಲಿ ಸಂಚಾರ ಪ್ರಕರಣ ಸಂಬಂಧಿಸಿ 405 ಕೇಸು ದಾಖಲಿಸಿ 2.2 ಲಕ್ಷ ರೂ ದಂಡ, ಹೆಡ್‌ಲೈಟ್ ನಿಯಮ ಉಲ್ಲಂಘನೆ, ಐಎನ್‌ಡಿ ನಂಬರ್ ಪ್ಲೇಟ್ ಇಲ್ಲದೆ ಇರುವ ವಾಹನ ಸೇರಿ 42 ಪ್ರಕರಣ ದಾಖಲಿಸಿ 21 ಸಾವಿರ ದಂಡ ವಸೂಲಿ ಮಾಡಲಾಗಿದೆ. ಟಿಂಟ್ ಗ್ಲಾಸ್ ಸಂಬಂಧಿಸಿ 102 ಕೇಸು ದಾಖಲಿಸಿ 57 ಸಾವಿರ ರೂ. ದಂಡ ವಿಧಿಸಲಾಗಿದೆ.
ಸಂಚಾರ ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಹನ ಸವಾರರು ಮೋಟಾರ್ ವಾಹನ ಕಾಯ್ದೆ ನಿಯಮ ಪಾಲಿಸಬೇಕು. ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಾಹನಗಳ ಕರ್ಕಶ ಶಬ್ಧ ವಿಶೇಷವಾಗಿ ಬುಲೆಟ್ ಸೌಂಡ್, ಸಂಚಾರ ನಿಯಮ ಪಾಲಿಸದ ವಾಹನಗಳ ಬಗ್ಗೆ ಜನ ವಾಹನ ಸಂಖ್ಯೆ ವಿವರ ಸಮೇತ ಭಾವಚಿತ್ರ ತೆಗೆದು ಸಂಚಾರ ವಿಭಾಗದ ವಾಟ್ಸಾೃಪ್ ಸಂಖ್ಯೆ 9480805446 ಗೆ ಸಂದೇಶ ಕಳಿಸಿ ಮಾಹಿತಿ ಕೊಡಬಹುದು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. - ಅಬ್ದುಲ್ ಖಾದರ್, ಉಡುಪಿ ನಗರ ಸಂಚಾರ ಠಾಣೆ ಎಸ್‌ಐ