

ಹೊಳೆನರಸೀಪುರ: ಪಟ್ಟಣದ ಕಿಕ್ಕೆರಮ್ಮನ ಕೊತ್ತಲಿನ ನಿವಾಸಿಗಳಿಗೆ ಸ್ಲಂ ಬೋರ್ಡ್ ವತಿಯಿಂದಲೇ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಡಿ.ರೇವಣ್ಣ ಸೂಚಿಸಿದರು.
ಪುರಸಭೆ ಅಧ್ಯಕ್ಷ ಎಚ್.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಎಚ್.ಡಿ. ದೇವೇಗೌಡ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಪಾಲ್ಗೊಂಡು ಮಾತನಾಡಿದರು.
ಕಿಕ್ಕೇರಮ್ಮನ ಕೊತ್ತಲಿನಲ್ಲಿ ವಾಸ ಮಾಡುತ್ತಿರುವ ಬಡಾವಣೆಯ ನಿವಾಸಿಗಳಿಗೆ ಸ್ಲಂ ಎಂದು ಘೋಷಿಸಿ ಸ್ಲಂ ಬೋರ್ಡ್‌ನಿಂದಲೇ ಹಕ್ಕು ಪತ್ರ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪಣೆ ಎತ್ತಿದ ಕಾಂಗ್ರೆಸ್‌ನ ಏಕೈಕ ಪುರಸಭೆ ಸದಸ್ಯ ಬೈರಶೆಟ್ಟಿ ಅವರು ಸ್ಲಂ ಬೋರ್ಡ್‌ನಿಂದ ಹಕ್ಕುಪತ್ರ ವಿತರಿಸಿದರೆ ನಿವಾಸಿಗಳು ಯಾವುದೇ ಸಾಲ ತೆಗೆದುಕೊಳ್ಳಲಾಗುವುದಿಲ್ಲ. ಪರಬಾರೆ ಮಾಡಲು ಸಹ ಸಾಧ್ಯವಿಲ್ಲ. ಹಾಗಾಗಿ, ಅಕ್ರಮ ಸಕ್ರಮದಡಿಯಲ್ಲಿ ಹಕ್ಕುಪತ್ರ ವಿತರಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಸಿದ ಶಾಸಕರು, ಸ್ಲಂ ಬೋರ್ಡ್‌ನಿಂದಲೇ ಹಕ್ಕುಪತ್ರ ವಿತರಿಸಲಾಗುತ್ತದೆ. ಕಾನೂನಿನನ್ವಯ ಎಷ್ಟು ಮಾಡಲು ಸಾಧ್ಯವೋ ಅಷ್ಟನ್ನು ಮಾಡೋಣ. ಸ್ಲಂ ಬೋರ್ಡ್‌ನ ಎಇಇ ಮಹದೇವಪ್ಪ ಅವರು ಸಹ ಬಂದಿದ್ದಾರೆ ಎಂದು ಸಮಾಜಾಯಿಸಿ ನೀಡಿದರು.
ಸರ್ಕಾರದ ವತಿಯಿಂದ ಪುರಸಭೆಗೆ ಎಂಟೂವರೆ ಕೋಟಿ ರೂ. ಮಂಜೂರಾಗಿದ್ದು, ಪಟ್ಟಣದ ಪ್ರತಿ ವಾರ್ಡ್‌ಗೂ ಚರಂಡಿ ರಸ್ತೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಚ್.ಕೆ. ಪ್ರಸನ್ನ ಹೇಳಿದರು.
ಅಧ್ಯಕ್ಷರ ಮಾತನ್ನು ಗಮನಿಸಿದ ಶಾಸಕ ಎಚ್.ಡಿ. ರೇವಣ್ಣ ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೂ ಸಮಾನವಾದ ಹಣವನ್ನು ಹಂಚಿ ಅಭಿವೃದ್ಧಿ ಮಾಡಲು ಕೆಲವು ಸಲಹೆ ಸೂಚನೆ ನೀಡಿದರು. ಹೇಮಾವತಿ ನದಿ ತೀರದಲ್ಲಿರುವ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸಿ ಮುಂಭಾಗದ ರಸ್ತೆ ಪಕ್ಕದಲ್ಲಿ ಟ್ಯಾಂಕ್ ಅನ್ನು ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.
ಅಧ್ಯಕ್ಷ ಎಚ್.ಕೆ. ಪ್ರಸನ್ನ ಮನವಿಯಂತೆ ಯೋಗ ಭವನದ ಸಮೀಪವಿರುವ ನಿವೇಶನದಲ್ಲಿ ಪತ್ರಿಕ ಭವನ ನಿರ್ಮಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸಾವಿತ್ರಿ, ಎಇಇ ಮಹಾದೇವಪ್ಪ ಇದ್ದರು.
ಸಭೆ ಆರಂಭಕ್ಕೂ ಮುನ್ನ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜೆಡಿಎಸ್‌ನ 22 ಸದಸ್ಯರ ಪೈಕಿ 14 ಜನರು ಮಾತ್ರ ವಿಶೇಷ ಸಭೆಗೆ ಹಾಜರಾಗಿದ್ದರು.