ಪ್ರಿಯಾಂಕ್ ಖರ್ಗೆ ಡಿಸಿಎಂ ಮಾಡಲು ಆರ್​ಎಸ್​ಎಸ್ ಮೇಲೆ ಕ್ರಮ

Shriramulu 3 March 20
Published on

ಹುಬ್ಬಳ್ಳಿ : ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ರಾಜ್ಯದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿ ಆರ್​ಎಸ್​ಎಸ್ ಮೇಲೆ ವಿನಾಕಾರಣ ಕಾನೂನು ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದರು.

ಆದರೆ, ಸಿದ್ದರಾಮಯ್ಯ ಅವರು ರಾಜಕೀಯದ ಸಂಧ್ಯಾಕಾಲದಲ್ಲಿ ಇದ್ದಾರೆ. ಸಿಎಂ ಬದಲಾವಣೆ ಖಚಿತ. ನವೆಂಬರ್ ಕ್ರಾಂತಿಯಾಗುವುದರಲ್ಲಿ ಸಂಶಯ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರೇ ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಅವರ ಮನದಾಳದ ಮಾತನ್ನು ಯತೀಂದ್ರ ಹೇಳಿದ್ದಾರೆ. ಈ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ನವೆಂಬರ್-ಡಿಸೆಂಬರ್​ನಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವ ಸಂದೇಹಗಳು ಎದ್ದು ಕಾಣುತ್ತಿವೆ ಎಂದರು.

ರಾಜ್ಯದಲ್ಲಿ ಅಘೋಷಿತ ತುರ್ತಪರಿಸ್ಥಿತಿ ನಿಮಾಣವಾಗಿದೆ. ಮಾಜಿ ಪ್ರಧಾನಿ ದಿ. ಇಂದಿರಾಗಾಂದಿ ಅವರು ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ವಾಲ್ಮೀಕಿ ಸಮೂದಾಯಕ್ಕೆ ಸೇರಿದ ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ನಮ್ಮ ಬೆಂಬಲವಿದೆ. ಹಿಂದುಳಿದ ವರ್ಗದ ನಾಯಕರೊಬ್ಬರು ಸಿಎಂ ಆದರೆ ನಮಗೂ ಸಂತೋಷ. ಇದರಿಂದ ವಾಲ್ಮೀಕಿ ಸಮುದಾಯಕ್ಕೆ ಮತ್ತಷ್ಟು ಶಕ್ತಿ ಸಿಕ್ಕಂತಾಗುತ್ತದೆ ಎಂದು ಬಿ. ಶ್ರೀರಾಮುಲು ಇದೇ ಸಂದರ್ಭದಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net