

ಅರಸೀಕೆರೆ: ಅಗ್ಗುಂದ ಗ್ರಾಮ ಪಂಚಾಯಿತಿಯ ಸರ್ಕಾರಿ ದಾಖಲೆಗಳನ್ನು ಪಿಡಿಒ ಮನೆಗೆ ತೆಗೆದುಕೊಂಡು ಹೋಗಿರುವುದರಿಂದ ಜನಪರ ಕೆಲಸಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಅಧ್ಯಕ್ಷೆ ಕವಿತಾ ಹೇಳಿದರು.
ದುರ್ನಡತೆ ತೋರುತ್ತಿರುವ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕು. ಅಧ್ಯಕ್ಷರು ಹಾಗೂ ಸದಸ್ಯರ ಮನವಿಗೆ ಸ್ಪಂದನೆ ದೊರೆಯದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದ ಪಿಡಿಒ ಮಂಜುಳಾ, ಕಳೆದ ಎರಡು ತಿಂಗಳಿನಿಂದ ಕಚೇರಿಗೆ ಬಂದಿಲ್ಲ. ಚೆಕ್‌ಬುಕ್, ಪ್ರಮುಖ ಕಡತಗಳು, ಬೀರುವಿನ ಕೀಲಿ ಕೈ ಹಾಗೂ ಲೇಔಟ್ ಫೈಲ್ ತೆಗೆದುಕೊಂಡು ಹೋಗಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಕೆಲಸ, ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಐತಿಹಾಸಿಕ ಮಾಲೇಕಲ್ ತಿರುಪತಿ ರಥೋತ್ಸವದ ವೇಳೆ ಸ್ವಚ್ಛತೆ ಮಾಡಲು ಸಾಧ್ಯವಿಲ್ಲದಂತೆ ಮಾಡಿರುವುದು ಕಪ್ಪು ಚುಕ್ಕೆಯಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ ಹಾಗೂ ತಾಪಂ ಇಒ ಗಮನಕ್ಕೆ ತಂದರೂ ಡೋಂಟ್‌ಕೇರ್ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಕೂಡಲೇ ನಿಯೋಜಿತ ಪಿಡಿಒ ಅವರಿಗೆ ಹೊಣೆಗಾರಿಕೆ ನೀಡುವ ಜತೆಗೆ ಕರ್ತವ್ಯ ಲೋಪ ಎಸಗಿರುವ ಪಿಡಿಒ ಮಂಜುಳಾ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.