ಕನ್ನಡ ಶಾಲೆಗಳ ಉನ್ನತೀಕರಣಕ್ಕೆ ಕ್ರಮವಾಗಲಿ: ಅಕ್ಕಿಆಲೂರ ನುಡಿ ಸಂಭ್ರಮದಲ್ಲಿ ಮೋಹನ್ ಆಳ್ವಾ ಸಲಹೆ

Nudi Sumbhrama
Published on

ಅಕ್ಕಿಆಲೂರ: ಕನ್ನಡ ಭಾಷೆಯ ಸರ್ವತೋಮುಖ ಏಳಿಗೆಗಾಗಿ ಸರ್ಕಾರಿ ಶಾಲೆಗಳಲ್ಲಿ ಅನೇಕ ಮಹತ್ವದ ಬದಲಾವಣೆಗಳು ನಡೆಯಬೇಕಿದ್ದು, ಸರ್ಕಾರ ನ್ಯೂನತೆಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕು ಎಂದು ಮೂಡುಬಿದರೆ ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ ಆಳ್ವಾ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾಸಂಘದ 32ನೇ ಕನ್ನಡ ನುಡಿ ಸಂಭ್ರಮದ ಎರಡನೇ ದಿನ ಶುಕ್ರವಾರ ಜನಪದ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ನಾಡ ಸಾಂಸ್ಕೃತಿಕ ನೃತ್ಯವನ್ನಾಗಿ ಯಕ್ಷಗಾನವನ್ನು ಘೊಷಿಸಬೇಕು, ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಜತೆಗೆ ಸಮಾಜದಲ್ಲಿ ಬದುಕಲು ಅಗತ್ಯವಿರುವ ನೈತಿಕ ಶಿಕ್ಷಣ ಹೇಳಿ ಕೊಡುತ್ತವೆ. ಶಾಲೆಗಳ ಮೂಲಕ ಕನ್ನಡ ಮತ್ತಷ್ಟು ಸದೃಢಗೊಳಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತರಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 20 ಸಾವಿರಕರ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪ್ರತಿಯೊಬ್ಬರಿಗೂ ದೇಸಿಯ ಕಲೆ, ನಮ್ಮ ಪರಂಪರೆಗಳನ್ನು ಅರ್ಥೈಸಿಕೊಳ್ಳಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ಜನಪದ ಗಾಯಕ ಗುರುರಾಜ ಹೊಸಕೋಟೆ ಮಾತನಾಡಿ, ನಮ್ಮ ಪುರ್ವಜರು, ಯಾವುದೆ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆಯದೆ, ತಮ್ಮ ಅನುಭದ ಮೂಲಕ ರಚಿಸಿದ ಜನಪದ ಸಾಲುಗಳು ಶತಶತಮಾನಗಳ ವರೆಗೂ ಪ್ರಸ್ತುತಗೊಳ್ಳಲಿವೆ. ಜನಪದ ಹಾಡುಗಳು ಕೇವಲ ಮನರಂಜನೆ ಮಾತ್ರವಲ್ಲ, ನಮ್ಮ ಜೀವನ ಶೈಲಿ ನಿರೂಪಿಸುವುದರ ಜತೆಗೆ, ಬದುಕಿನ ನೈಜತೆ ತಿಳಿಸುತ್ತದೆ ಎಂದರು.

ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಮಾತನಾಡಿ, ಕನ್ನಡ ನುಡಿ ಸಂಭ್ರಮ ಕೇವಲ ಒಂದು ಸಮಾರಂಭವಲ್ಲ, ಯುವಜನಾಂಗಕ್ಕೆ ಉತ್ತಮದಾರಿ ತೋರುವ ವೇದಿಕೆಯಾಗಿದೆ ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ ವಿಶೇಷ ನುಡಿ ನುಡಿದರು. ಸಾನ್ನಿಧ್ಯವಹಿಸಿದ್ದ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಗುರುರಾಜ ಹೊಸಕೋಟೆ ಅವರಿಗೆ ಬಸವ ಚೇತನ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಶಿವರಾಜ ಸಜ್ಜನರ, ಕಾಂತೇಶ ಈಶ್ವರಪ್ಪ, ರಾಜಶೇಖರ ಕಟ್ಟೆಗೌಡ್ರ, ಶಿವಾನಂದ ಮೆಳ್ಳೊಳ್ಳಿ, ವೀರಭದ್ರಪ್ಪ ಉಪ್ಪಿನ, ಅರುಣ ಮುಚ್ಚಂಡಿ, ಬಸವರಾಜ ಕೋರಿ, ಷಣ್ಮುಖಪ್ಪ ಮುಚ್ಚಂಡಿ, ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪುರಸ್ಕಾರ ನೀಡಿ ಗೌರವಿಸಿದರು. ನಂತರ ಕಡಬಗೇರಿ ಮುನಿರಾಜು ತಂಡದಿಂದ ಜನಪದ ಗಾನಸುಧೆ, ಸಾಗರ ತುರವೆಕೆರೆ ಅವರಿಂದ ಮಿಮಿಕ್ರಿ ಹಾಗೂ ಜನಪದ ಜಲಕ್ ಜರುಗಿತು. ಪಟ್ಟಣದ ಶಾಲೆಯ ವಿದ್ಯಾರ್ಥಿಗಳ ಅಮೋಘ ಜನಪದ ನೃತ್ಯಗಳು ಗಮನ ಸೆಳೆದವು.

ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ಅಕ್ಕಿಆಲೂರಿನ ಕನ್ನಡ ನುಡಿ ಸಂಭ್ರಮದ ಕೊಡುಗೆ ಅವಿಸ್ಮರಣೀಯವಾಗಿದೆ. ಸಮಾಜದ ಕಟ್ಟಕಡೆ ವ್ಯಕ್ತಿಗಳಲ್ಲಿನ ಶ್ರಮ ಮತ್ತು ಪ್ರತಿಭೆ ಗುರುತಿಸಿ ನುಡಿ ಸಂಭ್ರಮದ ಮೂಲಕ ಗೌರವಿಸುವ ದುಂಡಿಬಸವೇಶ್ವರ ಜನಪದ ಕಲಾಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮೂರಿನಲ್ಲಿ ವರ್ಷ ಪೂರ್ತಿ ಕನ್ನಡ ಕಟ್ಟುವ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. | ಪ್ರವೀಣ ಗೌಳಿ, ಯುವ ಉದ್ಯಮಿ, ಅಕ್ಕಿಆಲೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net