ಸೈಬರ್​ ಅಪರಾಧ ತಡೆಗೆ ಕ್ರಮವಾಗಲಿ

ab
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ಅವಳಿನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್​ ಅಪರಾಧಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹು-ಧಾ ಅವಳಿನಗರ ನಿವಾಸಿಗಳು ನಿತ್ಯ ಸುಮಾರು 11 ಲಕ್ಷ ರೂ.ಹಣವನ್ನು ಸೈಬರ್​ ಅಪರಾಧದಿಂದ ಕಳೆದುಕೊಳ್ಳುತ್ತಿರುವುದು ಆಘಾತಕಾರಿ ವಿಷಯ. ಈ ಭಾಗದಲ್ಲಿ ನಡೆದ ಸ್ಕ್ಯಾಮ್ ಗಳ ಕುರಿತು ಸಹಾಯವಾಣಿಗಳಿಗೆ ಕರೆ ಮಾಡಿ ಜನರು ದೂರು ನೀಡಲು ಮುಂದಾದರೆ ಆ ಸಂಖ್ಯೆ ಚಾಲ್ತಿಯಲ್ಲಿ ಇಲ್ಲ ಎಂಬ ಉತ್ತರ ಬರುತ್ತಿರುವುದು ವಿಪರ್ಯಾಸವೇ ಸರಿ.
ಹೀಗಾಗಿ ಪೊಲೀಸ್​ ಇಲಾಖೆ ಕೂಡಲೇ 1903 ಸಹಾಯವಾಣಿ ಹೊರತಾಗಿ, ಅವಳಿನಗರಕ್ಕೆ ಒಂದು ನಿರ್ದಿಷ್ಟ ನಂಬರ್​ ಅಥವಾ ಸಹಾಯವಾಣಿ ಮೀಸಲಿರಿಸಬೇಕು. ಆನ್​ಲೈನ್​ ಸ್ಕ್ಯಾಮ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಲ್ಲದೆ, ಜನರೂ ಎಚ್ಚರಿಕೆಯಿಂದ ವ್ಯವಹರಿಸಬೇಕು. ಈ ವಿಷಯವಾಗಿ ಪೊಲೀಸ್​ ಆಯುಕ್ತರೊಂದಿಗೆ ಮಾಡನಾಡಿ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಇಂತಹ ಅಪರಾಧಗಳ ತಡೆಗೆ ಗೃಹ ಸಚಿವ ಜಿ. ಪರಮೇಶ್ವರ ಬೆಂಬಲವೂ ಅಗತ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net