

ಬೆಳಗಾವಿ: ಅಪಾಯದ ಅಂಚಿನಲ್ಲಿರುವ ಮರಗಳ ಸರ್ವೇ ನಡೆಸಿ, ಹಾನಿ ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಮಂಗೇಶ ಪವಾರ ಅಧಿಕಾರಿಗಳಿಗೆ ಸೂಚಿಸಿದರು. ಬೆಳಗಾವಿ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಮತ್ತು ಮರ ಕತ್ತರಿಸುವ ಗುತ್ತಿಗೆದಾರರೊಂದಿಗೆ ಗುರುವಾರ ಆಯೋಜಿಸಿದ್ದ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ನಗರದಲ್ಲಿ ಮಹಾನಗರ ಪಾಲಿಕೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆಯಾ ವಾರ್ಡ್ಗಳ ಪಾಲಿಕೆ ಸದಸ್ಯರು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳು, ಅಪಾಯಕಾರಿ ಮರಗಳ ಸರ್ವೇ ನಡೆಸಬೇಕು ಎಂದರು. ಎ,ಬಿ,ಸಿ ಕ್ಯಾಟಗೇರಿಗಳನ್ನು ತಯಾರಿಸಿ ತ್ವರಿಗತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಹಾನಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, 15,000 ಮೀ. ನಾಲೆಗಳ ಹೂಳೆತ್ತಲಾಗಿದೆ. ಯುಜಿಡಿ ಮಷಿನ್, ನೂತನ ಜೆಟ್ಟಿಂಗ್ ಮಷಿನ್, ಸಕ್ಕಿಂಗ್ ಮಷಿನ್, ಯುಜಿಡಿ ವಾಹನಗಳೊಂದಿಗೆ ತಂಡ ಸಜ್ಜಾಗಿದೆ. ನಗರದಲ್ಲಿರುವ ಅಪಾಯಕಾರಿ ಮರಗಳ ರೆಂಬೆ&ಕೊಂಬೆಗಳನ್ನು ಕತ್ತರಿಸುವುದು ಮತ್ತು ಬೀಳುವಂತಹ ಸ್ಥಿತಿಯಲ್ಲಿರುವ ಮರಗಳ ತೆರವುಗೊಳಿಸಲು ಸರ್ವೇ ಮಾಡಲಾಗಿದೆ. ಸಹಾಯವಾಣಿ ಕೂಡ ಆರಂಭಿಸಲಾಗಿದೆ ಎಂದರು. ಕರೊನಾಗೆ ಸಂಬಂಧಿಸಿದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಮುಂಜಾಗ್ರತೆ ವಹಿಸಲಾಗುವುದು ಎಂದರು.
ಮಹಾನಗರ ಪಾಲಿಕೆ ಆಡಳಿತ ಪದ ನಾಯಕ ಹನುಮಂತ ಕೊಂಗಾಲಿ, ಸದಸ್ಯ ಜಯತೀರ್ಥ ಸೌಂದತ್ತಿ, ವಲಯ ಅರಣ್ಯ ಸಂರಣಾಧಿಕಾರಿ ಪುರುಷೋತ್ತಮ, ಉಪ ವಲಯ ಅರಣ್ಯಾಧಿಕಾರಿ ವಿನಯ ಗೌಡರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶ್ವಿನ ಶಿಂಧೆ, ಮಹಾನಗರ ಪಾಲಿಕೆ, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.