

ಅರಸೀಕೆರೆ: ತಾಲೂಕಿನ ಗೀಜಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಂಗ್ರಹದ ತೊಂಬೆಯನ್ನು (ಟ್ಯಾಂಕ್) ತೆರವು ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ತಾಲೂಕು ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದರು.
ಗ್ರಾಮದ ಜನ, ಜಾನುವಾರುಗಳ ಉಪಯೋಗಕ್ಕೆ ಜಿಲ್ಲಾ ಪಂಚಾಯಿತಿ ವತಿಯಿಂದ ಮೂರೂವರೆ ದಶಕಗಳ ಹಿಂದೆ ವೀರಭದ್ರೇಶ್ವರ ದೇಗುಲದ ಆಯಕಟ್ಟಿನ ಜಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಇರಿಸಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ತೊಂಬೆಯನ್ನು ದಿಢೀರ್ ತೆರವು ಮಾಡಲಾಗಿದೆ. ಸದ್ಯದ ಬೆಳವಣಿಗೆಯಿಂದ ಕೂಲಿ ಕೆಲಸಕ್ಕೆ ತೆರಳುವ ಜನರಿಗೆ ತೀವ್ರ ತೊಂದರೆ ಎದುರಾಗಿದೆ. ತೋಟದ ಮನೆಗಳ ನಿವಾಸಿಗಳು ಸಂಕಷ್ಟ ಅನುಭವಿಸುವ ಸನ್ನಿವೇಶ ನಿರ್ಮಾಣವಾಗಿದೆ. ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀರಿನ ಟ್ಯಾಂಕ್ ಅನ್ನು ಮೂಲ ಜಾಗದಲ್ಲಿ ಮರು ಅಳವಡಿಸುವ ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಒಂದು ವಾರದ ಗಡುವು ನೀಡಿದ್ದೇವೆ. ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಗೀಜಿಹಳ್ಳಿ ಗ್ರಾಪಂಗೆ ಬೀಗ ಜಡಿಯಲು ನಿರ್ಧರಿಸಲಾಗಿದೆ. ಜತೆಗೆ ರಸ್ತೆ ಸಂಚಾರ ತಡೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಕರಿಸಿದ್ದಪ್ಪ, ನಿಂಗರಾಜು, ಜಾನಪ್ಪ ಇತರರು ಇದ್ದರು.