

ಬೇಲೂರು: ಪುರಸಭೆ ವ್ಯಾಪ್ತಿಯ ಹನುಮಂತ ನಗರದಲ್ಲಿ ಖಾಸಗಿಯವರ ಲೇ ಔಟ್‌ಗೆ ಅನುಕೂಲ ಕಲ್ಪಿಸುವುದಕ್ಕಾಗಿ ಮನೆಗಳು, ಶೌಚಗೃಹಗಳನ್ನು ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಒಡೆದು ಹಾಕಲಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಜಿ ಸಚಿವ ಬಿ.ಶಿವರಾಮ್ ನೇತೃತ್ವದಲ್ಲಿ ನಿವಾಸಿಗಳು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ಹನುಮಂತ ನಗರ ನಿವಾಸಿಗಳು, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬಸವೇಶ್ವರ ವೃತ್ತಕ್ಕೆ ತೆರಳಿ ಪುರಸಭೆ ಅಧ್ಯಕ್ಷ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ಶಿವರಾಮ್ ಮಾತನಾಡಿ, ಅಧಿಕೃತ ರಸ್ತೆ ಇಲ್ಲದಿದ್ದರೂ ಬಿಜೆಪಿ ಮುಖಂಡರೊಬ್ಬರ ಲೇಔಟ್‌ಗೆ ಜಮೀನನ್ನು ಅಲಿನೇಷನ್ ಮಾಡಿಕೊಡುವುದಕ್ಕಾಗಿ ಮನೆ, ಶೌಚಗೃಹ, ತೆಂಗಿನ ಮರಗಳನ್ನು ಧ್ವಂಸ ಮಾಡುವ ಮೂಲಕ ಪುರಸಭೆಯವರು ರಸ್ತೆ ಮಾಡಿದ್ದಾರೆ. ಇದರ ಹಿಂದೆ ಶಾಸಕರ ಕೈವಾಡವಿದೆ. ಬೇಲೂರು ಪುರಸಭೆಯಲ್ಲಿ ಅಧ್ಯಕ್ಷರು ಸೇರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತಕ್ಷಣವೇ ತಹಸೀಲ್ದಾರರು ಸ್ಥಳಕ್ಕೆ ತೆರಳಿ ಅಳತೆ ಮಾಡಿಸಿ ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ನ್ಯಾಯ ಕೊಡಿಸಬೇಕು. ಇಲ್ಲದ್ದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೆಹರು ನಗರದಲ್ಲಿರುವ ಜಾಗ ಕಬಳಿಕೆಯಾಗಿದ್ದು ಪುರಸಭೆಯವರು ಕ್ರಮಕೈಗೊಳ್ಳುತ್ತಿಲ್ಲ ಎಂದು ತಹಸೀಲ್ದಾರ್ ಡಿಸಿಗೆ ಪತ್ರ ಬರೆದಿದ್ದರು. ಈ ಸಂದರ್ಭ ಶಾಸಕ ಹಾಗೂ ಪುರಸಭೆ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತುರ್ತು ಸಭೆ ಕರೆದು ಖಾತೆ ಮಾಡುವುದಾಗಿ ತಿಳಿಸಿದ್ದರೂ ಇನ್ನೂ ಏಕೆ ಖಾತೆ ರದ್ದಾಗಿಲ್ಲ. ಯಾರಿಗೆ ಹೆಚ್ಚುವರಿಯಾಗಿ ಖಾತೆಯಾಗಿದೆಯೋ ಅದು ರದ್ದಾಗಬೇಕು. ಆದರೆ ಪುರಸಭೆಯವರು ಕೆಲಸ ಮಾಡಲು ಶಾಸಕರು ಬಿಡುತ್ತಿಲ್ಲ ಎಂದು ಆರೋಪಿಸಿದ ಅವರು, ವಾಣಿಜ್ಯ ಮಳಿಗೆಗಳ ವಿಚಾರವಾಗಿ ಶಾಸಕರು ಮುಖ್ಯಾಧಿಕಾರಿಗೆ ಪತ್ರ ಬರೆದು ಹಳಬರಿಗೆ ಕೊಡಬೇಕೆಂಬ ಸೂಚನೆಯನ್ನು ಸ್ವಾಗತಿಸುತ್ತೇನೆ. ಆದರೆ ಇದರಲ್ಲಿ ನಡೆದ ಭ್ರ ಷ್ಟಾಚಾರ ನೋಡಿ ಡಿಸಿ ಮಳಿಗೆಗಳ ಹರಾಜನ್ನು ರದ್ದಪಡಿಸಿದರು ಎಂದರೆ ಯಾವ ಮಟ್ಟದಲ್ಲಿ ಅಧ್ಯಕ್ಷರು ಅವ್ಯವಹಾರ ನಡೆಸಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಕಿಡಿಕಾರಿದರು.
ಶಾಸಕರು ಸದನದಲ್ಲಿ ಕಾನೂನು ಮಾತನಾಡುತ್ತಾರೆ. ಆದರೆ ಇಲ್ಲಿ ಅವರೇ ಮಳಿಗೆ ವಿಚಾರದಲ್ಲಿ ಕಾನೂನು ಉಲ್ಲಂಘಿಸುತ್ತಾರೆ. ಮಳಿಗೆ ಹರಾಜಿನಲ್ಲಿ ಸಾರ್ವಜನಿಕರು ಭಾಗವಹಿಸಬಾರದು ಎಂದರೆ ಹೇಗೆ. ಮಳಿಗೆ ಹರಾಜು ಅವ್ಯವಹಾರದ ವಿಚಾರವಾಗಿ ತಹಸೀಲ್ದಾರ್ ಡಿಸಿಗೆ ಪತ್ರ ಬರೆದಿರುವುದರ ಜತೆಗೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ. ಇದರಿಂದ ಪುರಸಭೆಗೆ ಭಾರಿ ನಷ್ಟವಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದರೆ ನಮ್ಮ ವಿರುದ್ಧವೇ ಪ್ರತಿಭಟಿಸುತ್ತೇವೆ ಎನ್ನುತ್ತಾರೆ. ಅವರು ಪ್ರತಿಭಟಿಸುವ ಮುನ್ನ ನಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿ. ಈ ಎಲ್ಲ ಘಟನೆಗಳು ಶಾಸಕರ ಕುಮ್ಮಕ್ಕಿನಿಂದಲೇ ನಡೆಯಲು ಕಾರಣವಾಗಿದ್ದು, ಇಂದು ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯರಾದ ಶಾಂತಕುಮಾರ್, ಬಿ.ಗಿರಿಶ್, ಭರತ್, ರತ್ನಸತ್ಯನಾರಾಯಣ್, ಸಿ.ಎನ್.ದಾನಿ, ಜಿಪಂ ಮಾಜಿ ಸದಸ್ಯ ಸಯ್ಯದ್ ತೌಫಿಕ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೆಶ್, ಮುಖಂಡರಾದ ಬಿ.ಎಂ.ಸಂತೋಷ್, ಚೇತನ್, ಪ್ರಸನ್ನ, ಜೀಪ್ ಚಂದ್ರು, ನಂದೀಶ್, ಆಶಾ, ಕರವೇ(ಪ್ರವೀಣ್‌ಶೆಟ್ಟಿ)ಬಣದ ಕಾರ್ಯದರ್ಶಿ ಲೋಕೇಶ್, ಹನುಮಂತ ನಗರದ ನಿವಾಸಿಗರಾದ ಯೋಗಾಚಾರ್, ಪವನ್, ರಘು, ಚರಣ್, ಪೂಜಾ, ಪಲ್ಲವಿ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.