

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ನಾಡ ಹಬ್ಬ ದಸರಾ ನಿಮಿತ್ತ ಅ. 2ರಿಂದ 12ರವರೆಗೆ ಶಾಲೆಗಳಿಗೆ ದಸರಾ ರಜೆ ಘೋಷಿಸಿದೆ. ಆದರೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ನಿಯಮ ಉಲ್ಲಂಘಿಸಿ ಶಾಲೆ ನಡೆಸುತ್ತಿವೆ. ಇಂತಹ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರೆ ರಜೆಯಲ್ಲೂ ಶಾಲೆಯಲ್ಲಿ ತರಗತಿ, ಪರೀಕ್ಷೆ ನಡೆಸುತ್ತಿರುವ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ನಡೆ ಸರಿಯಲ್ಲ. ಇದು ಹಿಂದೂ ವಿರೋಧಿ ನೀತಿ. ಹಬ್ಬದ ಸಮಯದಲ್ಲಿ ಮಕ್ಕಳಿಗೂ ಇದು ಸಮಸ್ಯೆ. ಹೀಗಾಗಿ ದಸರಾ ರಜೆ ನಿಯಮ ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು. ಇದಲ್ಲದೆ ಸರ್ಕಾರ ನೀಡಿರುವ ಅನುದಾನ ಹಿಂಪಡೆಯಬೇಕು ಎಂದರು.
ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಬಹುತೇಕ ಮಕ್ಕಳು ಹಿಂದುಗಳೇ. ನಾಡ ಹಬ್ಬದ ರಜೆ ನಿಯಮ ಪಾಲನೆ ಮಾಡದ ಈ ಶಾಲೆಗಳು ಕ್ರಿಸ್ಮಸ್ ಹಬ್ಬಕ್ಕೆ ನೀಡುವ 10 ದಿನಗಳ ರಜೆ ರದ್ದು ಮಾಡಬೇಕು. ಇದು ಬ್ರಿಟಿಷ್ ಪದ್ಧತಿ ಆಗಿದ್ದು, ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಕ್ರಿಶ್ಚಿಯನ್ ಸಂಸ್ಥೆಗಳು ಹೆಸರಿಗಷ್ಟೇ ಶಿಕ್ಷಣ ಸಂಸ್ಥೆಗಳು. ಉಳಿದಂತೆ ಮತಾಂತರ ಕೇಂದ್ರಗಳಾಗಿವೆ. ಕುಂಕುಮ ಹಚ್ಚಿಕೊಳ್ಳಬೇಡಿ, ಬಳೆ ಹಾಕಿಕೊಳ್ಳಬೇಡಿ ಎಂಬ ನಿಯಮ ಮಾಡುತ್ತಾ ಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ವಿಷ ಬೀಜ ಬಿತ್ತುತ್ತಿದ್ದಾರೆ. ಹಿಂದೂ ಸಂಸ್ಕೃತಿಗೆ ಅವಮಾನ ಮಾಡುವ, ಅಳಿಸಿ ಹಾಕುವ ಹುನ್ನಾರ ಇದಾಗಿದೆ. ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪಾಲಕರಿಗೆ ಬುದ್ದಿ ಇದೆಯಾ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಿಶ್ವದಲ್ಲಿ ಭಯದ ವಾತಾವರಣ ಹುಟ್ಟು ಹಾಕಿರುವ ಭಯೋತ್ಪಾದನೆ ನಿರ್ಮೂಲನೆ ಮಾಡಲು ಹೆಜ್ಜೆ ಇಟ್ಟಿರುವ ಇಸ್ರೇಲ್ ದೇಶಕ್ಕೆ ಶ್ರೀರಾಮ ಸೇನೆ ಕರ್ನಾಟಕದ ಬೆಂಬಲವಿದೆ. ನಮ್ಮ ದೇಶಕ್ಕೂ ಇಸ್ರೇಲ್ ಮಾದರಿ ಅಗತ್ಯವಿದೆ. ಹೀಗಾಗಿ ಭಾರತವೂ ಈ ಕ್ರಮ ಅಳವಡಿಸಿಕೊಳ್ಳಬೇಕು ಎಂದರು.
ಗಂಗಾಧರ ಕುಲಕರ್ಣಿ, ಇತರರು ಇದ್ದರು.