

ಮಂಡ್ಯ: ಕೆರೆಗಳ ಸಂರಕ್ಷಣೆ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಬಗ್ಗೆ ಆದ್ಯತೆ ನೀಡುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿಗೆ ತಯಾರಿಸಲಾದ ಕ್ರಿಯಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೆರವುಗೊಳಿಸಿದ ನಂತರ ಮತ್ತೆ ಒತ್ತುವರಿಯಾಗದಂತೆ ಕೆರೆ ಗಡಿ ಭಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿ ನೆಡೆಸುವ ಬಗ್ಗೆ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಕರ್ತವ್ಯ ನಿರ್ವಹಿಸಿ ಎಂದರು.
ವಿವೇಕಾ ಯೋಜನೆಯಡಿ ಹಿಂದಿನ ಸಾಲಿನಲ್ಲಿ ಯಾವ ಏಜೆನ್ಸಿಗಳಿಗೆ ಶಾಲಾ ಕೊಠಡಿ ನಿರ್ಮಾಣ ಕೆಲಸ ವಹಿಸಲಾಗಿತ್ತು ಎಂಬ ಬಗ್ಗೆ ವರ್ಷವಾರು, ಕಾಮಗಾರಿವಾರು ಪ್ರಗತಿ ವರದಿಯನ್ನು ಮುಂದಿನ ಸಭೆಯಲ್ಲಿ ಮಾಹಿತಿ ನೀಡುವಂತೆ ಡಿಡಿಪಿಐಗೆ ಸೂಚಿಸಿದ ಸಿಇಒ, ಏಜೆನ್ಸಿರವರು ಸಹ ತಮಗೆ ವಹಿಸಲಾಗಿದ್ದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿವಾರು, ವರ್ಷವಾರು ಪರಿಶೀಲನೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಿಪಂನ 2025-26ನೇ ಸಾಲಿಗೆ ಅಭಿವೃದ್ಧಿ ಅನುದಾನ 6.24 ಕೋಟಿ ರೂ ನಿಗದಿಯಾಗಿದೆ. ಮಾರ್ಗಸೂಚಿಯನ್ವಯ ಕ್ರಿಯಾ ಯೋಜನೆ ತಯಾರಿಸಬೇಕಾಗಿದೆ. ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿರುವ ತಾಲೂಕಿಗೆ ಭೇಟಿ ನೀಡಿ ಕ್ರಿಯಾ ಯೋಜನೆ ಪರಿಶೀಲಿಸಬೇಕು. ಪ್ರತಿ ತ್ರೈಮಾಸಿಕ ಅನುದಾನ ಬಿಡುಗಡೆಯಾದಂತೆ ಕಾರ್ಯಕ್ರಮಗಳಲ್ಲಿ ಪ್ರಗತಿ ಸಾಧಿಸಿರುವ ಬಗ್ಗೆ ಮುಖ್ಯ ಲೆಕ್ಕಾಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿ ಪರಿಶೀಲನೆ ಮಾಡಬೇಕು. ಕಾಮಗಾರಿ ಹಾಗೂ ಇತರೆ ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ಯೆಯಿದ್ದಲ್ಲಿ ವೈಯಕ್ತಿಕ ಗಮನಹರಿಸಿ. ತಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಆಗದಿದ್ದಲ್ಲಿ ಜಿ.ಪಂ ಅಧಿಕಾರಿಗಳು ಗಮನಕ್ಕೆ ತಂದು ಚರ್ಚಿಸಬೇಕು. ಔಷಧ ಸಂಬಂಧಿತ ಹಾಗೂ ಇತರೆ ತುರ್ತು ಇದ್ದಲ್ಲಿ ಕೂಡಲೇ ಇಲಾಖಾಧಿಕಾರಿಗಳು ಕಡತ ಮಂಡಿಸಿ ಚರ್ಚಿಸಿದಲ್ಲಿ ಮುಂದಿನ ಕ್ರಮ ವಹಿಸಲಾಗುವುದು. ಪ್ರತಿ ಸೋಮವಾರದ ಜತೆಗೆ ಗುರುವಾರ ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ತಾಲೂಕಿನ ನೋಡಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಸಾರ್ವಜನಿಕರ ಕುಂದು ಕೊರತೆ ಆಲಿಸಬೇಕು ಎಂದು ಸೂಚನೆ ನೀಡಿದರು.
ಉಪ ಕಾರ್ಯದರ್ಶಿ(ಅಭಿವೃದ್ಧಿ) ಬಾಬು ಮಾತನಾಡಿ, 2025-26ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಜಿಪಂ ಅನಿರ್ಬಂಧಿತ ಅನುದಾನದಡಿ ಜಿಲ್ಲೆಗೆ 6.24 ಕೋಟಿ ರೂ ಹಂಚಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ವಯ ಕ್ರಿಯಾ ಯೋಜನೆ ತಯಾರಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಟಿ.ಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಧನುಷ್ ಇತರರಿದ್ದರು.