

ಕಾನಹೊಸಹಳ್ಳಿ: ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಒಂದು ವೇಳೆ ಕಳಪೆ ಬಿತ್ತನೆ ಬೀಜ ಹಂಚಿಕೆ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಎಚ್ಚರಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಿ ಶನಿವಾರ ಮಾತನಾಡಿದರು. ಕಳಪೆ ಬಿತ್ತನೆ ಬೀಜಗಳಿಂದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ, ಕೃಷಿ ತಜ್ಞರು ಸೂಚಿಸುವ ಹಾಗೂ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಟ್ಟ ಬಿತ್ತನೆ ಬೀಜಗಳನ್ನು ವಿತರಿಸಬೇಕು ಎಂದರು.
ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳನ್ನು ವಿತರಿಸಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಕೇಳಬಾರದು ಎಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ನೀಲಮ್ಮ ಬೊಮ್ಮಣ್ಣ, ಉಪಾಧ್ಯಕ್ಷ ಬೋರಣ್ಣ, ಸಹಾಯಕ ಕೃಷಿ ನಿರ್ದೇಶಕ ಸುನೀಲ್‌ಕುಮಾರ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ.ಚೈತ್ರಾ, ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಬಣವಿಕಲ್ಲು ಎರ‌್ರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ಲೋಕಿಕೆರೆ ಕರಿಬಸಪ್ಪ, ಬಿ.ಟಿ.ಗುದ್ದಿ ದುರುಗೇಶ್ ಇತರರಿದ್ದರು.