

ರಾಯಚೂರು: ಮುಂದಿನ ಹತ್ತು ದಿನಗಳಲ್ಲಿ ದೇವದುರ್ಗ ತಾಲೂಕಿನಲ್ಲಿರುವ ಗಣೇಕಲ್ ಜಲಾಶಯವನ್ನು ಭರ್ತಿ ಮಾಡಲು ಅಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ನಗರದ 12 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವ ರಾಂಪುರ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗಣೇಕಲ್ ಜಲಾಶಯ ಭರ್ತಿ ಮಾಡದಿದ್ದರೆ ರಾಯಚೂರು ನಗರ ಸೇರಿದಂತೆ ಹಲವು ಗ್ರಾಮಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ ಎಂದರು.
ತುಂಗಭದ್ರಾ ಜಲಾಶಯದಿಂದ ನದಿಗೆ ಪ್ರತಿನಿತ್ಯ 13 ಸಾವಿರ ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿದೆ. ಕೃಷ್ಣಾ ನದಿಯಿಂದ ಎರಡು ಪಂಪ್‌ಗಳ ಮೂಲಕ ಗಣೇಕಲ್ ಜಲಾಶಯಕ್ಕೆ ನೀರು ಸಂಗ್ರಹ ಮಾಡಲಾಗುತ್ತಿದೆ. ವೈಟಿಪಿಎಸ್‌ಗೆ ನೀರು ಹರಿಸುತ್ತಿರುವುದರಿಂದ ಕೇವಲ ಎರಡು ಪಂಪ್‌ಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ.
ಗಣೇಕಲ್ ಜಲಾಶಯದಲ್ಲಿ 25 ಅಡಿ ನೀರು ಸಂಗ್ರಹಕ್ಕೆ ಅಕಾರಿಗಳು ಮುಂದಾಗಬೇಕಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಗಣೇಕಲ್ ಜಲಾಶಯ ಭರ್ತಿ ಮಾಡಿಕೊಂಡು ರಾಂಪುರ ಜಲಾಶಯಕ್ಕೆ ನೀರು ಹರಿಸುವ ಮೂಲಕ ನಗರಕ್ಕೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಡಾ.ಶಿವರಾಜ ಪಾಟೀಲ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಈ.ಶಶಿರಾಜ, ಮುಖಂಡರಾದ ಆಂಜಿನೇಯ ಕಡಗೋಲ, ಎನ್.ಶ್ರೀನಿವಾಸರೆಡ್ಡಿ, ಪಿ.ಆಂಜಿನೇಯ, ಸನ್ನಿ ರೋನಾಲ್ಡ್ ಉಪಸ್ಥಿತರಿದ್ದರು.