

ನರಗುಂದ: ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಿಂದ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವನ್ನು ಸಮರ್ಪಕ ನಿರ್ವಹಣೆ ಮಾಡುವುದು ಅಗತ್ಯವಾಗಿದೆ ಎಂದು ತಾಪಂ ಇಒ ಎಸ್.ಕೆ. ಇನಾಮದಾರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಾಟಾಗಿದ್ದ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛ ವಾಹಿನಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಪಂಗಳಲ್ಲಿ ಮಹಿಳೆಯರಿಂದಲೇ ಕಸ ವಿಲೇವಾರಿ ಕಾರ್ಯ ಕೈಗೊಳ್ಳಲಾಗುತ್ತದೆ. ಸ್ವಸಹಾಯ ಸಂಘದ ಮಹಿಳಾ ಒಕ್ಕೂಟದಿಂದ ಪ್ರತಿ ಗ್ರಾಪಂನಿಂದ ತಲಾ ಒಬ್ಬ ಚಾಲಕಿ ಹಾಗೂ ಮೂವರು ಕಸ ಸಂಗ್ರಹಗಾರರನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಿ ನಾಹನ ಚಾಲನಾ ಪತ್ರ (ಡ್ರೖೆವಿಂಗ್ ಲೈಸೆನ್ಸ್) ನೀಡಲಾಗಿದೆ. ತಾಲೂಕಿನ ಪ್ರತಿಯೊಂದು ಗ್ರಾಪಂನಲ್ಲೂ ಸ್ವಚ್ಛ ವಾಹಿನಿಗಳ ಮೂಲಕ ಕಸ ಸಂಗ್ರಹಣೆ ಮಾಡಿ ಘನ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಸಂಗ್ರಹಿಸಲಾಗುವುದು. ಒಣ ಕಸ, ಹಸಿ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸಿ ಸ್ಥಳಾಂತಿಸಲಾಗುವುದು. ಇದರಿಂದ ಗ್ರಾಮಸ್ಥರು ಸ್ವಚ್ಛತೆ ಜೊತೆಗೆ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ, ಜಿಪಂ ಜಿಲ್ಲಾ ಸಮಾಲೋಚಕ ಕೃಷ್ಣ ದೊಡ್ಡಮನಿ ಮಾತನಾಡಿದರು. ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ಎನ್ಆರ್ಎಲ್ಎಂ ಸಿಬ್ಬಂದಿ, ಸ್ವಚ್ಛ ವಾಹಿನಿಯ ಚಾಲಕಿಯರು ಹಾಗು ಕಸ ಸಂಗ್ರಹಗಾರರು ಇದ್ದರು.