

ಬೇಲೂರು: ಹಳೇಬೀಡು ಸಮೀಪದ ಬಿದರಿಕೆರೆಗೆ ಹಳ್ಳಗಳ ಮೂಲಕ ನೀರು ಹರಿದು ಬರುತಿದ್ದ ಸ್ಥಳವನ್ನು ಕೆಲವರು ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಕರವೇ (ನಾರಾಯಣಗೌಡ)ಬಣದ ನೇತೃತ್ವದಲ್ಲಿ ಗ್ರಾಮಸ್ಥರು ತಹಸೀಲ್ದಾರ್ ಎಂ.ಮಮತಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕರವೇ(ನಾರಾಯಣಗೌಡ)ಬಣದ ಜಿಲ್ಲಾ ಉಪಾಧ್ಯಕ್ಷ ಸೀತಾರಾಂ, ಹಳೇಬೀಡು ಗ್ರಾಪಂ ವ್ಯಾಪ್ತಿಯ ಬಿದರಿಕೆರೆ ಒಂದು ಕಾಲದಲ್ಲಿ ತುಂಬಿ ತುಳುಕುತಿತ್ತು. ದ್ವಾರಸಮುದ್ರ ಕೆರೆ ತುಂಬಿದ ನಂತರ ಹೆಚ್ಚುವರಿ ನೀರು ಬಿದರಿ ಕೆರೆಗೆ ಹರಿದು ಬರುತ್ತಿತ್ತು. ಕಾಲ ಕ್ರಮೇಣ ಕಾಲುವೆ ಹಾಗೂ ಹಳ್ಳಗಳನ್ನು ಕೆಲವರು ಒತ್ತುವರಿ ಮಾಡಿ ಅಡ್ಡಗಟ್ಟಿರುವುದರಿಂದ ಸರಾಗವಾಗಿ ಹರಿದು ಬರುತ್ತಿದ್ದ ನೀರೆಲ್ಲ ಜಮೀನು ಮನೆಗಳಿಗೆ ನುಗ್ಗುತ್ತಿರುವುದರಿಂದ ಬಿದರಿಕೆರೆಗೆ ನೀರು ಬರುತ್ತಿಲ್ಲ. ಅಲ್ಲದೆ 42 ಎಕರೆ ವಿಸ್ತೀರ್ಣದ ಬಿದರಿಕೆರೆ ಸಾಕಷ್ಟು ಒತ್ತುವರಿಯಾಗಿದೆ. ಆದ್ದರಿಂದ ಒತ್ತುವರಿ ತೆರವುಗೊಳಿಸಿ ಬಿದರಿಕೆರೆಗೆ ನೀರು ಸರಾಗವಾಗಿ ಹರಿದು ಬಂದರೆ ಜಮೀನುಗಳಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ. ತಹಸೀಲ್ದಾರರು ಈ ಬಗ್ಗೆ ಗಮನ ಹರಿಸಿ ಕೆರೆ ಕಟ್ಟೆಗಳನ್ನು ಉಳಿಸಲು ಮುಂದಾಗಬೇಕು ಎಂದರು.
ಕರವೇ(ನಾರಾಯಾಣಗೌಡ) ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಹಳೇಬೀಡಿನ ಬಿದರಿಕೆರೆ ಸಹ ಸಾಕಷ್ಟು ಜಮೀನುಗಳಿಗೆ ನೀರುಣಿಸುತ್ತದೆ. ಆದರೆ ಈ ಕೆರೆಗೆ ಹರಿದು ಬರುವ ಕಾಲುವೆ, ಹಳ್ಳಗಳನ್ನು ಕೆಲವರು ಒತ್ತವರಿ ಮಾಡಿದ್ದು, ಮುಂದಿನ 30 ದಿನದೊಳಗೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಕರವೇ ತಾಲೂಕು ಗೌರಾಧ್ಯಕ್ಷ ಮಾಳೆಗೆರೆ ತಾರಾನಾಥ್, ತಾಲೂಕು ಕಾರ್ಯದರ್ಶಿ ಕುಮಾರ್, ಹಳೆಬೀಡು ಹೊಬಳಿ ಅಧ್ಯಕ್ಷ ಈಶ್ವರ್, ಗ್ರಾಮಸ್ಥರಾದ ಪ್ರದೀಪ್, ಆರಾಧ್ಯ, ಕಿರಣ್, ಉಮೇಶ್, ಮೂರ್ತಯ್ಯ, ಬಸವರಾಜು, ಸುರೇಶ್, ಪಾಂಡು ಮತ್ತಿತರರಿದ್ದರು.
ಮನವಿ ಸ್ವೀಕರಿಸಿ ಮಾತನಡಿದ ತಹಸೀಲ್ದಾರ್ ಎಂ.ಮಮತಾ, ಸರ್ಕಾರಿ ಭೂಮಿ, ಹಳ್ಳಕೊಳ್ಳ, ಕೆರೆ ಕಟ್ಟೆ ಉಳಿಸಲು ಸರ್ಕಾರದ ನಿರ್ದೇಶನವಿದೆ. ಅದರಂತೆ ಅವರೇ ತೆರವುಗೊಳಿಸಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ನಾವೇ ತೆರವಿಗೆ ಮುಂದಾಗಲಿದ್ದೇವೆ ಎಂದರು.