ಕೆಲಸದಲ್ಲಿ ಉದಾಸೀನ ಮಾಡಿದರೆ ಕ್ರಮ ಅನಿವಾರ್ಯ

ಸಾಲಿಗ್ರಾಮದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಹಾಂತೇಶ್ ಅರ್ಜಿ ಸ್ವೀಕರಿಸಿದರು.
ಸಾಲಿಗ್ರಾಮದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಹಾಂತೇಶ್ ಅರ್ಜಿ ಸ್ವೀಕರಿಸಿದರು.
Published on

ಸಾಲಿಗ್ರಾಮ: ಅರ್ಜಿ ಕೊಟ್ಟು ಎರಡ್ಮೂರು ವರ್ಷಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಹಾಂತೇಶ್ ಕಿಡಿಕಾರಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ವತಿಯಿಂದ ಆಯೋಜಿಸಿದ್ದ ಬುಧವಾರ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಸಮಸ್ಯೆ ಬಗೆಹರಿಸುವಂತೆ ಅರ್ಜಿ ಹಿಡಿದು ಕಚೇರಿಗೆ ಬರುವ ಸಾರ್ವಜನಿಕರಿಗೆ ಸಕಾಲದಲ್ಲಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ. ಇದನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಉದಾಸೀನ ಮಾಡಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಕಂದಾಯ ಇಲಾಖೆಗೆ ರೈತರು ಅರ್ಜಿ ಸಲ್ಲಿಸಿದ ನಂತರ ಸಮಸ್ಯೆ ಬಗೆಹರಿಸುವುದಿಲ್ಲ. ಅಲ್ಲದೆ ನಾವು ಕೊಟ್ಟ ಅರ್ಜಿ ಎಲ್ಲಿದೆ ಎಂದು ಕೇಳಿದರೂ ಅದು ಸಿಗುವುದಿಲ್ಲ ಎಂದು ವೃದ್ಧರು ಅಳಲು ತೋಡಿಕೊಂಡರು. ಇಂತಹ ಪ್ರಕರಣಗಳನ್ನು ಆದಷ್ಟು ಬೇಗ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆ ಮುಗಿದ ಮೇಲೆ ಬಂದ ತಹಸೀಲ್ದಾರ್ ನರಗುಂದ ಅವರ ವಿರುದ್ಧ ಲೋಕಾಯುಕ್ತರು ಗರಂ ಆದರಲ್ಲದೆ, ನಿಮ್ಮ ವ್ಯಾಪ್ತಿಗೆ ಬರುವ ದೂರುಗಳು ಹೆಚ್ಚಿದ್ದು, ಸಭೆಗೆ ಈಗ ಬಂದಿದ್ದೀರ. ಸಾರ್ವಜನಿಕರೊಂದಿಗೆ ಹೀಗೆ ವರ್ತಿಸಿದರೆ ಕ್ರಮ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು.

ಪಿಡಿಒಗಳು ಸೇರಿದಂತೆ ಗ್ರಾಪಂ ಸಿಬ್ಬಂದಿ ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸುತ್ತಿಲ್ಲ. ಕಚೇರಿಗೆ ಅಲೆದು ಸುಸ್ತಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಅರ್ಜಿ ಕೊಟ್ಟ ಸಾರ್ವಜನಿಕರಿಗೆ ಸಕಾಲದಲ್ಲಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂಬ ದೂರು ಬಹಳಷ್ಟು ಇದ್ದು, ಈ ಮನೋಭಾವದಿಂದ ಹೊರ ಬರಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಹಾಂತೇಶ್ ತಿಳಿ ಹೇಳಿದರು.

ಬಹುತೇಕ ರೈತರು ಕಂದಾಯ, ಗ್ರಾಮ ಪಂಚಾಯಿತಿ, ಸರ್ವೇ, ಕೆ-ಶಿಪ್ ಕಂಪನಿಯ ಅವೈಜ್ಞಾನಿಕ ಕಾಮಗಾರಿಗಳ ಕುರಿತು ದೂರು ನೀಡಿದರು. ಲಿಖಿತ ದೂರುಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್ಪಿ ಎಚ್ಚರಿಕೆ ನೀಡಿದರು.

ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net