

ಸಾಗರ: ಮಾದಕ ವಸ್ತು ಸಾಗಣೆ, ಸೇವನೆ ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ಟಿ.ನಾಯ್ಕ್ ಎಚ್ಚರಿಕೆ ನೀಡಿದರು.
ನಗರ ಠಾಣೆಯಲ್ಲಿ ಶನಿವಾರ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿ ಮಾತನಾಡಿ, ನಿಮ್ಮ ಹೆಂಡತಿ ಮಕ್ಕಳ ಜತೆ ಉತ್ತಮವಾಗಿ ಸಂಸಾರ ಮಾಡಿಕೊಂಡು ಹೋಗಿ. ಇಲಾಖೆಯಿಂದ ನಿಮಗೆ ಯಾವುದೇ ತೊಂದರೆ ಬರುವುದಿಲ್ಲ. ಒಂದೊಮ್ಮೆ ನಿಮ್ಮ ಹಳೇ ಚಾಳಿಯನ್ನು ಪುನರಾರಂಭಿಸಿದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ರೌಡಿ ಚಟುವಟಿಕೆಯಲ್ಲಿ ನಿರತರಿಗೆ ಎಚ್ಚರಿಕೆ ನೀಡಿದರು.
ಮಾದಕ ವಸ್ತು ಸೇವನೆ, ಸಾಗಣೆ, ಜೂಜು, ಮಟ್ಕಾ ದಂಧೆ, ಮಹಿಳೆಯರನ್ನು ಚುಡಾಯಿಸುವುದು, ರೌಡಿಸಂ ಇತರ ಚಟುವಟಿಕೆಗೆ ಅವಕಾಶ ಇಲ್ಲ. ಪೊಲೀಸರು ನಿಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ. ದೇಶದ ಕಾನೂನಿಗೆ ನೀವು ಗೌರವ ಕೊಡುವುದನ್ನು ಕಲಿಯಿರಿ. ಅದನ್ನು ಬಿಟ್ಟು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಸುಮ್ಮನಿರುವುದಿಲ್ಲ. ಶಾಲಾ ಕಾಲೇಜು ಅಕ್ಕಪಕ್ಕದಲ್ಲಿ ತಂಬಾಕುಮಿಶ್ರಿತ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಜತೆಗೆ ಕೆಲವು ವಿದ್ಯಾರ್ಥಿಗಳು ತ್ರಿಬಲ್ ರೈಡಿಂಗ್ ಹೋಗುವುದು, ಕರ್ಕಶ ಹಾರ್ನ್ ಹಾಕುವುದು, ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನ ಓಡಿಸುವುದನ್ನು ಮಾಡುತ್ತಿದ್ದು ಅಂತಹವರ ವಿರುದ್ದ ದಿನಕ್ಕೆ ಎರಡು ಕೇಸ್ ಕಡ್ಡಾಯ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿ ಗೃಹಗಳಲ್ಲಿ ಸರ್ಕಾರದ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ರೂಮ್‌ಗಳನ್ನು ನೀಡುವಾಗ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ ಅವರು, ಗಣೇಶನ ಹಬ್ಬ ಸೇರಿದಂತೆ ವಿವಿಧ ಹಬ್ಬಗಳು ಬರುತ್ತಿದ್ದು ಶಾಂತಿ ಸೌಹಾರ್ದತೆ ಕಾಪಾಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ನಗರ ಠಾಣೆ ವೃತ್ತ ನಿರೀಕ್ಷಕರಾದ ಚಿದಾನಂದ್, ಕೃಷ್ಣಪ್ಪ, ಪಿಎಸ್‌ಐಗಳಾದ ತುಕಾರಾಮ ಸಾಗರಕರ್, ನಾರಾಯಣ ಮಧುಗಿರಿ, ಸುಜಾತಾ, ನಾಗರಾಜ್ ಇತರರಿದ್ದರು.