ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸದಿದ್ದರೆ ಕ್ರಮ

Action if the hospital mess is not fixed
ಮುಧೋಳ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಚಿವ ಆರ್.ಬಿ. ತಿಮ್ಮಾಪುರ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
Published on

ಮುಧೋಳ: ಆಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ರೋಗಿಗಳಿಗೆ ಸರ್ಕಾರದ ಮೆನು ಪ್ರಕಾರ ಆಹಾರ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಎಚ್ಚರಿಕೆ ನೀಡಿದರು.

ನಗರದ ಮಹಾಲಿಂಗಪುರ ರಸ್ತೆಯಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಆಸ್ಪತ್ರೆಯಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿದರಲ್ಲದೆ, ಇಲ್ಲಿನ ಚಿಕಿತ್ಸೆ, ವೈದ್ಯರ ಕಾರ್ಯವೈಖರಿ, ವ್ಯವಸ್ಥೆಗಳ ಕುರಿತು ವಿಚಾರಿಸಿದರು. ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡದಿದ್ದರೆ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಮುಖ್ಯವೈದ್ಯಾಧಿಕಾರಿ ಡಾ. ಅಶೋಕ ಸೂರ್ಯವಂಶಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸ್ಥಳಕ್ಕೆ ಕರೆಯಿಸಿಕೊಂಡು ಅವ್ಯವಸ್ಥೆ ಕುರಿತು ಪ್ರಶ್ನಿಸಿದಾಗ ವೈದ್ಯಾಧಿಕಾರಿ ಉತ್ತರ ನೀಡಲು ತಡಬಡಿಸಿದರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡು ಇನ್ನು ಮೇಲೆ ಆಸ್ಪತ್ರೆ ವೈದ್ಯರ ಹಾಗೂ ವ್ಯವಸ್ಥೆ ಕುರಿತು ದೂರುಗಳು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಸೂರ್ಯವಂಶಿ ಇತರರಿದ್ದರು.

ಆಸ್ಪತ್ರೆಯಲ್ಲಿ ವಯಸ್ಸು ನಿರ್ಧರಿಸುವ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯರು ಹಾಗೂ ನೇತ್ರ ತಜ್ಞರು ಇಲ್ಲದಿರುವ ಕುರಿತು ಸಚಿವರ ಗಮನಕ್ಕೆ ತಂದಾಗ ಕೂಡಲೇ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net