

ಜಮಖಂಡಿ: ಜನಸ್ಪಂದನದಲ್ಲಿ ಬಂದ ಅರ್ಜಿಗಳನ್ನು ಒಂದು ವಾರದಲ್ಲಿ ಇತ್ಯರ್ಥ ಪಡಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಾಲೂಕುಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲೂಕಾಡಳಿತ ಸೌಧದಲ್ಲಿ ಬುಧವಾರ ನಡೆದ ತಾಲೂಕುಮಟ್ಟದ ಜನಸ್ಪಂದನ ಸಭೆಯಲ್ಲಿ ಅವರು ಮಾತಾಡಿದರು.
ನಿಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗೆ ಪರಿಹಾರ ಸಿಗುವಂತಿದ್ದರೆ ತಕ್ಷಣ ಪರಿಹರಿಸಿ, ಇತ್ಯವಾಗದಂತವುಗಳನ್ನು ಮೇಲಧಿಕಾರಿಗಳಿಗೆ ವರದಿ ನೀಡಬೇಕು. ರಾಜ್ಯದಲ್ಲಿ ಸಿಎಂ ಅವರು ಎಲ್ಲ ಅರ್ಜಿಗಳನ್ನು ಖುದ್ದಾಗಿ ಪರಿವೀಕ್ಷಣೆ ಮಾಡುತಿದ್ದಾರೆ. ಸಿಬ್ಬಂದಿ ಮೇಲೆ ಹಾಕಿ ಸುಮ್ಮನೆ ಕೂಡದೇ ಖುದ್ದಾಗಿ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ತಿಳಿಸಿದರು.
ಕುರಗೋಡ ಅಂಗನವಾಡಿಗೆ ಹುಳು ಇರುವ ಹಾಗೂ ಕಳಪೆ ಗುಣಮಟ್ಟದ ರವಾ, ಶೇಂಗಾ ಹಿಂಡಿ ನೀಡಿದ್ದಾರೆ. ಈ ಬಗ್ಗೆ ಸಿಡಿಪಿಒ ಅವರಿಗೆ ಮಾಹಿತಿ ನೀಡಿದರೂ ನಿರ್ಲಕ್ಷಿಸುತಿದ್ದಾರೆ ಎಂದು ಗ್ರಾಮದ ರಾಮಗೊಂಡ ಬಿರಾದಾರ ಡಿಸಿ ಅವರ ಗಮನಕ್ಕೆ ತಂದರು. ಇದಕ್ಕೆ ಗರಂ ಆದ ಡಿಸಿ ಜಾನಕಿ ಕೆ.ಎಂ. ಅವರು, ಸಿಡಿಪಿಒ ಎಂ.ಪಿ. ದಾಸರ ಅವರಿಗೆ ನಿವೇನು ಮನುಷ್ಯರಲ್ವಾ, ಆಹಾರ ಗುಣಮಟ್ಟ ಪರೀಕ್ಷೆ ಮಾಡಲಿಕ್ಕೆ ಆಗಲ್ವ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ, ಅವರಿಗೆ ನೋಟಿಸ್ ನೀಡುವಂತೆ ಎಸಿಗೆ ಸೂಚಿಸಿದರು.
ಆಹಾರ ಪದಾರ್ಥಗಳನ್ನು ಪೂರೈಸುವ ಆಹಾರ ಸಂಸ್ಕರಣಾ ಘಟಕದ ಸಿಬ್ಬಂದಿ ಸಭೆಗೆ ಕರೆದುಕೊಂಡ ಬಂದ ಸಿಡಿಪಿಒ, ಆಹಾರ ಸರಿಯಾಗಿದೆ ಎಂದು ಸಬೂಬ್ ಹೇಳಲು ಮುಂದಾದಾಗ ಡಿಸಿ ಅವರು 8 ದಿನ ಕೆಟ್ಟ ಆಹಾರ ಪದಾರ್ಥಗಳನ್ನು ಕೊಟ್ಟಿದ್ದೀಯಾ ಮಕ್ಕಳಿಗೆ ಮಾತಾಡಲಿಕ್ಕೆ ಬರಲ್ವಂತೆ ಎಂದು ಸಿಡಿಗೊಂಡರಲ್ಲದೆ, ಎಲ್ಲರಿಗೂ ನೋಟಿಸ್ ನೀಡಲು ತಿಳಿಸಿದರು.
ಹಿರೇಪಡಸಲಗಿಯಿಂದ ಕಾರ್ಖಾನೆ ರಸ್ತೆ ಸಂಪೂರ್ಣ ಹದಗೆಟ್ಟಿದೆ, ಶಾಲೆ ಮಕ್ಕಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದಾಗ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಆರ್. ಬಂಡಿವಡ್ಡರ ಟೆಂಡರ್ ಆಗಿದ್ದು, ವರ್ಕ್ ಆರ್ಡರ್ ನೀಡಲಾಗಿದೆ ಎಂದರು. ಇದಕ್ಕೆ ವರ್ಕ್ ಆರ್ಡ್‌ರ್ ಕೊಟ್ಟು ಎಷ್ಟು ದಿನವಾಯಿತು ಎಂದು ಡಿಸಿ ಪ್ರಶ್ನಿಸಿದಾಗ, ಅಂದಾಜು 3 ತಿಂಗಳಾಯಿತು ಎನ್ನುತ್ತದ್ದಂತೆ, ಏಕೆ ತಡ ಮಾಡ್ತಿರಿ, ಕೆಲಸ ಮಾಡೊಕೆ ಆಗಲ್ವಾ ನಿಮಗೆ ಎಂದು ಶೋಕಾಸ್ ನೋಟಿಸ್ ನೀಡಲು ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕ್ರಮ ಜರುಗಿಸಿಲ್ಲ ಎಂದು ದೂರುದಾರ ತಿಳಿಸಿದಾಗ ಇದಕ್ಕೆ ಸ್ಥಳದಲ್ಲಿದ್ದ ಸಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. ಜನಸ್ಪಂದನ ಸಭೆಗೆ ಖುದ್ದಾಗಿ ಆಯಾ ಇಲಾಖೆ ಅಧಿಕಾರಿಗಳು ಮಾಹಿತಿಯೊಂದಗೆ ಹಾಜರಿರಬೇಕು. ಅಪೂರ್ಣವಿದ್ದರೆ ಸಭೆಯನ್ನೇ ಕರೆಯಬೇಡಿ, ಸಭೆಗೆ ಬಾರದ ಅಧಿಕಾರಿಗಳಿಗೆ ಶೋಕಾಸ್ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರಿಗೆ ಡಿಸಿ ಸೂಚಿಸಿದರು.
ಪುನರ್ವಸತಿಗೆ ಸಂಬಂಧಿಸಿದಂತೆ ಅರ್ಜಿಗಳು ಬಹಳಷ್ಟು ಬರುತ್ತಿದ್ದು, ಇದೆ ಇಲಾಖೆಯ ಒಂದು ಅದಾಲತ್ ಮಾಡಬೇಕು ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 250ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಜನಸ್ಪಂದನದಲ್ಲಿ ಸಮಸ್ಯೆಗಳು ಇತ್ಯರ್ಥವಾಗಬೇಕು. ಜಮಖಂಡಿ ನಗರದಲ್ಲಿನ ಚರಂಡಿ ವ್ಯವಸ್ಥೆ ಸರಿಪಡಿಸುವ ಕಾರ್ಯಗಳಾಗಬೇಕು. ದೇಸಾಯಿ ವೃತ್ತದಿಂದ ಅಂಬೇಡ್ಕರ್ ವೃತ್ತವರೆಗಿನ ಬೈಪಾಸ್ ರಸ್ತೆ ಹದಗೆಟ್ಟು ಹೋಗಿದೆ. ರಸ್ತೆ ಬದಿಯ 18 ಜನ ಕುಟುಂಬದವರಿಗೆ ನಿವೇಶನ ನೀಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಜು.3 ರಂದು ಗುರುದೇವ ರಾನಡೆ ಅವರ ಜನ್ಮ ದಿನ ಈ ಹಿನ್ನಲೆಯಲ್ಲಿ ಅಂದು ಗುರುದೇವ ರಾನಡೆ ಸಾಂಸ್ಕೃತಿಕ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರು ಆಗಮಿಸಲಿದ್ದಾರೆ ಎಂದರು.
ಹುನ್ನೂರ, ಕಡಪಟ್ಟಿ, ಸಿದ್ದಾಪುರ ಸೇರಿ ವಿವಿಧ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ತಾಪಂ ಇಒ ಸಂಜು ಜುನ್ನೂರ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಭೂಸ್ವಾಧಿನ ವಿಶೇಷ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಲೋಕೋಪಯೋಗಿ ಇಲಾಖೆಯ ಕಡಿವಾಳ, ತಹಸೀಲ್ದಾರ್ ಸದಾಶಿವ ಮಕ್ಕೋಜಿ ಇತರರಿದ್ದರು.
ಜನಸ್ಪಂದನ ಸಭೆಗೆ ಸಮಸ್ಯೆಗಳ ಸರಮಾಲೆಗಳ ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ನೂರಾರು ಜನರು ತಾಲೂಕು ಆಡಳಿತ ಸೌಧದಲ್ಲಿ ಸೇರಿದ್ದರು.