ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

26 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 31 ಕೇಂದ್ರಗಳ ಮೂಲಕ ಅಗತ್ಯ ಬಿತ್ತನೆ ಬೀಜ ಹಾಗೂ ಸೊಸೈಟಿ, ಖಾಸಗಿ ಮಾರಾಟಗಾರರು ಸುಮಾರು 500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ರಸಗೊಬ್ಬರ ವಿತರಿಸಲು ಕ್ರಮವಹಿಸಲಾಗಿದೆ. ಆದಾಗ್ಯೂ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ವಿತರಿಸಲು ಅನಗತ್ಯ ಷರತ್ತು ವಿಧಿಸುವುದು, ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಲೈಸನ್ಸ್​ ರದ್ದುಪಡಿಸಿ ಅವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 40.79ರಷ್ಟು ಹೆಚ್ಚಾಗಿದ್ದು, ರೈತರು ಬಿತ್ತನೆ ಪೂರ್ವ ಚಟುವಟಿಕೆ ಹಾಗೂ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಕಾಲಕ್ಕೆ ಸಿಗಲಿ ಎಂಬ ಉದ್ದಶಕ್ಕೆ 14 ರೈತ ಸಂಪರ್ಕ ಕೇಂದ್ರಗಳ ಜತೆಗೆ 17 ಹೆಚ್ಚುವರಿಯಾಗಿ ಕೇಂದ್ರಗಳನ್ನು ತೆರೆಯಲಾಗಿದೆ. ರಜಾ ದಿನಗಳಲ್ಲೂ ಕೇಂದ್ರ ತೆರೆಯಲು ಸೂಚಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ದಟ್ಟಣೆ ಹೆಚ್ಚಾದರೆ ತಕ್ಷಣ ಹೆಚ್ಚುವರಿ ಕೌಂಟರ್​ ತೆರೆದು ಬೀಜ ವಿತರಿಸಲು ಕೃಷಿ ಇಲಾಖೆ ಮೂಲಕ ಕ್ರಮಕೈಗೊಳ್ಳಲಾಗಿದೆ.
ಬೀಜ ಹಾಗೂ ಗೊಬ್ಬರ ವಿಷಯದಲ್ಲಿ ಅನಗತ್ಯವಾಗಿ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ಆದಾಗ್ಯೂ ಕೃಷಿ ಪರಿಕರ ಮಾರಾಟಗಾರರು, ಸೊಸೈಟಿ ಸಿಬ್ಬಂದಿ ರೈತರಿಗೆ ಅನಗತ್ಯ ಷರತ್ತು ವಿಧಿಸುವುದು, ಕೊರತೆ ಇದೆ ಎಂದು ಬಿಂಬಿಸಿ ಕೃತಕ ಅಭಾವ ಸೃಷ್ಟಿಗೆ ಪ್ರಯತ್ನಿಸಿದರೆ ಮಾರಾಟಗಾರರ ಲೈಸನ್ಸ್​ ರದ್ದುಪಡಿಸಿ, ಕಾನೂನು ಪ್ರಕಾರ ಕ್ರಿಮಿನಲ್​ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ನಿಯಮಿತವಾಗಿ ಎಲ್ಲ ಮಾರಾಟ ಮಳಿಗೆಗಳನ್ನು ಭೇಟಿ ಮಾಡಿ ಪರಿಶೀಲಿಸಿ ಜಿಲ್ಲೆಯಲ್ಲಿ ನಕಲಿ ಕೃಷಿ ಪರಿಕರಗಳ ವಿತರಣೆ ಆಗದಂತೆ ನಿಗಾ ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಬಿತ್ತನೆ ಬೀಜದ ಮಾದರಿ ಹಾಗೂ ರಸಗೊಬ್ಬರದ 120 ಮಾದರಿಗಳನ್ನು ಗುಣಮಟ್ಟದ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರತಿ ವಿತರಣಾ ಕೇಂದ್ರದಿಂದ ವಿತರಿಸುವ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣವನ್ನು ಪರೀಕ್ಷಿಸಿ ಗುಣಮಟ್ಟ ಖಾತ್ರಿಪಡಿಸಿಕೊಂಡು ವಿತರಿಸಲಾಗುತ್ತಿದೆ. ಎಲ್ಲ ತಹಸೀಲ್ದಾರರಿಗೆ ಮತ್ತು ಸಹಾಯಕ ಕೃಷಿ ನಿರ್ದೇಶಕರಿಗೆ ನಿಯಮಿತವಾಗಿ ರೈತರ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ವಿತರಣೆ ಕಾರ್ಯ ಪರಿಶೀಲಿಸಿ, ರೈತರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳು, ಉಪ ಕೃಷಿ ನಿರ್ದೇಶಕರ ಕಚೇರಿ ಸಂಕಿರ್ಸಬಹುದು ಎಂದು ದಿವ್ಯ ಪ್ರಭು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net