ಜನರ ಕೆಲಸ ಮಾಡಿಕೊಡದಿದ್ದರೆ ಕ್ರಮ

RemasterDirector_1a5c03258
RemasterDirector_1a5c03258
Published on

ಪಿರಿಯಾಪಟ್ಟಣ : ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರ ಕೆಲಸ ಮಾಡಿಕೊಡದೆ ಅನವಶ್ಯಕವಾಗಿ ಕಚೇರಿಗಳನ್ನು ಅಲೆಸುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಸುಚಿತ್ ಎಚ್ಚರಿಕೆ ನೀಡಿದರು. ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಅವರು ಮಾತನಾಡಿದರು.


ಲಂಚ ಪಡೆದರೆ ಮಾತ್ರ ನಾವು ಕ್ರಮ ಕೈಗೊಳ್ಳುವುದಿಲ್ಲ. ಸಾರ್ವಜನಿಕರ ಕೆಲಸ ಮಾಡಿಕೊಡಲು ಅನಗತ್ಯವಾಗಿ ಕಾಲ ವಿಳಂಬ ಮಾಡಿದರೂ ಸಹ ನಮ್ಮ ವಿಚಾರಣೆ ಎದುರಿಸಬೇಕು. ನ್ಯಾಯ ಕೇಳಿ ಬಂದವರಿಗೆ ಸರಿಯಾಗಿ ಮಾರ್ಗದರ್ಶನ ಮಾಡಿ, ನೀವು ಇಲ್ಲಿ ಹಣ ಮಾಡಲು ಬಂದಿಲ್ಲ. ಸರ್ಕಾರಿ ಸೇವೆ ಮಾಡಲು ಬಂದಿದ್ದೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.


ಬೇರೆ ತಾಲೂಕುಗಳಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗಿಂತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಆದರೆ ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಜರಾಗಿದ್ದಾರೆ. ಪ್ರಚಾರದ ಕೊರತೆಯಿಂದ ಈ ರೀತಿ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.
ಜಮೀನಿನಲ್ಲಿ ಸೆಸ್ಕ್ ಇಲಾಖೆಯವರು ವಿದ್ಯುತ್ ಕಂಬ ತೆರವು ಮಾಡುತ್ತಿಲ್ಲ ಎಂದು ಚಿಟ್ಟೆನಹಳ್ಳಿ ಗ್ರಾಮದ ಚಂದ್ರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಎಇಇ ಒಂದು ವರ್ಷದ ಹಿಂದೆ ನನ್ನ ಬಳಿ ತಂದಿದ್ದರು. ನಂತರ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿ ಹೋದವರು ಈಗ ನಿಮ್ಮ ಮುಂದೆ ಬಂದಿದ್ದಾರೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.


ಪುರಸಭೆ ಅಧಿಕಾರಿಗಳು ಸರಿಯಾಗಿ ದಾಖಲೆಗಳನ್ನು ನೀಡುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಗ್ರಾಮ ಠಾಣಾ ಭೂಮಿಯಲ್ಲಿರುವ ರಸ್ತೆ ತೆರವುಗೊಳಿಸಿಕೊಡುತ್ತಿಲ್ಲ. ಪೊಲೀಸರು ಕಾರು ಕಳವಾದ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ದೂರುಗಳು ಸೇರಿದಂತೆ 11 ದೂರುಗಳು ಈ ಸಂದರ್ಭದಲ್ಲಿ ಸಲ್ಲಿಕೆಯಾದವು.

ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಯ್ಯ, ಇನ್ಸ್‌ಪೆಕ್ಟರ್‌ಗಳಾದ ರೂಪಾಶ್ರೀ, ರವಿಕುಮಾರ್, ಉಮೇಶ್, ತಹಸೀಲ್ದಾರ್ ಸುರೇಂದ್ರ ಮೂರ್ತಿ, ತಾಪಂ ಇಒ ಸುನೀಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net