ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದರೆ ಕ್ರಮ

klr
Published on

ಕೋಲಾರ: ನಗರದ ಎಸ್​.ಎನ್​.ಆರ್​ ಜಿಲ್ಲಾ ಆಸ್ಪತ್ರೆಗೆ ಶನಿವಾರ ಶಾಸಕ ಕೊತ್ತೂರು ಮಂಜುನಾಥ್​ ದಿಢೀರ್​ ಭೇಟಿ ನೀಡಿ, ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು.

ಆಸ್ಪತ್ರೆಯ ವೈದ್ಯರು ಸೇರಿ ಸಿಬ್ಬಂದಿಯ ಹಾಜರಾತಿ ಪುಸ್ತಕ, ಆಡಳಿತದ ಖರ್ಚು ವೆಚ್ಚದ ಕಡತಗಳನ್ನು ಪರಿಶೀಲಿಸಿದ ಶಾಸಕರು, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಿರಬೇಕು ಎಂದು ಸೂಚಿಸಿದರು. ನಂತರ ವಿವಿಧ ವಾರ್ಡ್​ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಲೇರಿಯಾ ಮತ್ತು ಡೆಂಯಂತಹ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಕಾಯಿಲೆಗಳು ಬರದಂತೆ ಸ್ವಚ್ಛತೆ ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಹಾಗೂ ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳ ಮಾಫಿಯಾ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಬಾರದು. ಹಾಗೂ ಹೊರಗಿನ ಔಷಧಗಳಿಗೆ ಚೀಟಿ ಬರೆದುಕೊಟ್ಟಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರಲ್ಲದೆ, ಇಲ್ಲಿನ ಸಿಬ್ಬಂದಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುವುದು ಹಾಗೂ ಖಾಸಗಿ ಆಂಬುಲೆನ್ಸ್​ಗಳಿಗೆ ಶಿಫಾರಸ್ಸು ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಜನ್​ ಡಾ.ಜಗದೀಶ್​ಗೆ ನಿರ್ದೇಶಿಸಿದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಸರ್ಜನ್​ ಜಗದೀಶ್​, ಮುಖಂಡ ಮೈಲಾಂಡಹಳ್ಳಿ ಮುರಳಿ ಇದ್ದರು.

ಸ್ವಚ್ಛತೆಗೆ ಆದ್ಯತೆ ನೀಡಿ

ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜತೆಗೆ ಸೌಜನ್ಯದಿಂದ ವರ್ತಿಸಬೇಕು. ದಿನನಿತ್ಯ ಸುಮಾರು 1,200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ರಕ್ಷಣೆ ದೃಷ್ಟಿಯಿಂದ ತಾಯಿ ಮಕ್ಕಳ ವಾರ್ಡ್​ನಲ್ಲಿ ಪಾಸ್​ ಮತ್ತು ಟ್ಯಾಗ್​ ಕಡ್ಡಾಯವಾಗಿ ನೀಡಿ, ಅವರ ಬಗ್ಗೆ ನಿಗಾ ವಹಿಸಬೇಕು ಎಂದು ಕೊತ್ತೂರು ಮಂಜುನಾಥ್​ ಸೂಚಿಸಿದರು.

ಸಮಸ್ಯೆಗಳಿಗೆ ಪರಿಹಾರ ಶ್ರೀ

ಆಸ್ಪತ್ರೆಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಮೂಲ ಸೌಕರ್ಯಗಳನ್ನು ಒದಗಿಸಿದ ನಂತರ ಎಲ್ಲ ಸೌಲಭ್ಯಗಳನ್ನು ಒಂದೇ ಕಡೆಯಲ್ಲಿ ಸಿಗುವಂತೆ ಮಾಡಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಅವುಗಳನ್ನು ವೈದ್ಯರು ಮತ್ತು ಸಿಬ್ಬಂದಿ ಸರಿಪಡಿಸಿಕೊಂಡು ಹೋಗಬೇಕು. ಇಲ್ಲಿ ಪಾರ್ಕಿಂಗ್​ ಸಮಸ್ಯೆಯೊಂದಿಗೆ ಖಾಸಗಿ ಆಂಬುಲೆನ್ಸ್​ಗಳ ಹಾವಳಿ ಹೆಚ್ಚಾಗಿದೆ. ಮುಂದೆ ಎಲ್ಲವೂ ಸರಿಹೋಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net