ಅಧಿಕಾರಿಗಳು ನಿಷ್ಕಾಳಜಿ ವಹಿಸಿದರೆ ಕ್ರಮ

27 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಣ್ಣಿ ಮತ್ತು ತುಪ್ಪರಿ ಹಳ್ಳದ ಅಂಚಿನಲ್ಲಿರುವ ಗ್ರಾಮಗಳಲ್ಲಿ ರಾತ್ರಿ ವೇಳೆ ಪ್ರವಾಹ, ಅತಿವೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಕ್ರಮ ವಹಿಸಬೇಕು. ಕಾರ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಅಧಿಕಾರಿ, ಸಿಬ್ಬಂದಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳ ಕೆಲ ಭಾಗಗಳಲ್ಲಿ ತುಂಬಿ ಹರಿಯುತ್ತಿದ್ದು, ಪ್ರಾಣ ಹಾನಿ ಆಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್​ ತಂತಿಗಳು, ಕಂಬಗಳು ಬೀಳದ ಹಾಗೆ ಎಚ್ಚರ ವಹಿಸಬೇಕು. ಕೋವಿಡ್​ ಬಂದಿರುವುದರಿಂದ ಮುನ್ನೆಚ್ಚರಿಕೆ ವಹಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಪ್ರಸಕ್ತ ಸಾಲಿನ ಸಮೀಕ್ಷೆ ಪ್ರಕಾದ ವಿವಿಧ ಶಾಲೆಗಳ ಸುಮಾರು 62 ಕೊಠಡಿಗಳು ಸೋರುತ್ತಿವೆ. ಶಾಲೆ ಆರಂಭಕ್ಕೂ ಪೂರ್ವ ಕೊಠಡಿಗಳ ದುರಸ್ತಿ ಕಾರ್ಯ ನಡೆಸಬೇಕು. ಜಿಲ್ಲೆಯಲ್ಲಿ 1,622 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 42 ಅಂಗನವಾಡಿಗಳು ದುರಸ್ತಿ ಆಗಬೇಕು. ಇಲಾಖೆ ಅನುದಾನದಲ್ಲಿ ಈ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು. ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್​ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್​, ಉಪ ಪೊಲೀಸ್​ ಆಯುಕ್ತ ಮಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net