ಪೋಷಕಾಂಶಯುಕ್ತ ಆಹಾರ ನೀಡದಿದ್ದರೆ ಕ್ರಮ

29ಎಆರ್‌ಕೆ-1
-ಅರಕಲಗೂಡಿನ ತಾಪಂ ಸಭಾಂಗಣದಲ್ಲಿ ಬುಧವಾರ ಆಡಳಿತಾಧಿಕಾರಿ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on

ಅರಕಲಗೂಡು: ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ ನಿಲಯಗಳಲ್ಲಿನ ಮಕ್ಕಳಿಗೆ ಪೋಷಕಯುಕ್ತ ಆಹಾರ ನೀಡದಿರುವುದು ಕಂಡುಬಂದಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ನೇರ ಹೊಣೆ. ಇದೇ ಮುಂದುವರಿದರೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಪಂ ಉಪ ಕಾರ್ಯದರ್ಶಿಯೂ ಆಗಿರುವ ತಾಪಂ ಆಡಳಿತಾಧಿಕಾರಿ ಎಂ.ಬಾಬು ಎಚ್ಚರಿಸಿದರು.

ಬುಧವಾರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ನಿಗದಿತ ಪೋಷಕಾಂಶಗಳ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿಲ್ಲದಿರುವ ಬಗ್ಗೆ ಇತ್ತೀಚೆಗೆ ಜಿಪಂ ಮುಖ್ಯಕಾರ್ಯದರ್ಶಿ ಗಮನಕ್ಕೆ ಬಂದಿದೆ. ಅಲ್ಲದೆ ನಾನು ಕೂಡ ಕೆಲ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ಸಿದ್ಧಗೊಂಡಿದ್ದ ಮಕ್ಕಳ ತಿಂಡಿ, ಊಟ ಸೇವನೆ ಮಾಡಿದಾಗ ಕೇವಲ ಒಂದೆರಡು ತರಕಾರಿ ಬಳಕೆ ಮಾಡಿ ಸಾಂಬಾರು ಮಾಡಿರುವುದು ಕಂಡುಬಂದಿತ್ತು. ಕೇವಲ ಕುಂಬಳ ಕಾಯಿ, ಮಂಗಳೂರು ಸೌತೆಕಾಯಿ ಬಳಕೆ ಇತ್ತು. ಸ್ಥಳೀಯವಾಗಿ ದೊರೆಯುವ ಹಸಿ ತರಕಾರಿಗಳು, ಕಾಳುಗಳು, ಸೊಪ್ಪು, ಬಿನ್ಸ್ ಬಳಕೆಯಾಗುತ್ತಿಲ್ಲ. ಇನ್ನೂ ಬೆಳಗ್ಗಿನ ತಿಂಡಿಯ ಕತೆಯನ್ನು ಹೇಳತೀರದಾಗಿದೆ. ನಮ್ಮ ಸರ್ಕಾರಿ ಶಾಲೆ-ಕಾಲೇಜುಗಳು, ವಿದ್ಯಾರ್ಥಿನಿಲಯಗಳಲ್ಲಿ ಗ್ರಾಮೀಣ ಭಾಗದ ಬಡಮಕ್ಕಳೇ ವಾಸಿಸುತ್ತಿದ್ದಾರೆ. ಇವರಿಗೆ ಪೋಷಕಾಂಶಗಳುಳ್ಳ ಆಹಾರ ಪದಾರ್ಥ ಕೊಡದಿದ್ದರೆ ಅವರು ಹೇಗೆ ಆರೋಗ್ಯವಂತರಾಗಿ ಶಿಕ್ಷಣ ಪಡೆಯಲು ಸಾಧ್ಯ. ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನದಾಗಿ ಪೋಷಕಾಂಶ ಆಹಾರ ಅತ್ಯವಶ್ಯಕ ಎಂದರು.

ಸರ್ಕಾರಿ ನಿಯಮಾನುಸಾರ ವಿದ್ಯಾರ್ಥಿನಿಲಯಗಳಿಗೆ ತರಕಾರಿ ವಿತರಣೆ ಮಾಡದ ಏಜೆನ್ಸಿಯವರನ್ನು ಕೂಡಲೇ ಬದಲಾಯಿಸಿ. ಅಲ್ಲದೆ ನಿಗದಿತ ತರಕಾರಿ ನೀಡಿರುವ ಕುರಿತು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಂದ ಲಿಖಿತ ಮಾಹಿತಿ ಪಡೆದುಕೊಳ್ಳಬೇಕು. ಪ್ರಮುಖವಾಗಿ ಅಡುಗೆ ಸಿಬ್ಬಂದಿ ಗುಣಮಟ್ಟದಿಂದ ಆಹಾರ ತಯಾರಿಸುವ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿದ್ಯಾರ್ಥಿ ವೇತನ ನೀಡಿಲ್ಲ : ತಾಲೂಕಿನಲ್ಲಿ ಕಳೆದ ಸಾಲು ಮತ್ತು ಈ ಸಾಲಿನ ವಿದ್ಯಾರ್ಥಿ ವೇತನ ನೀಡದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಸರ್ಕಾರ ಮಟ್ಟದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗುತ್ತಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ವಿಳಂಬ ಏಕೆ ಆಗುತ್ತಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಆಯಾ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಇತರ ಪ್ರತಿಭಾ ಪುರಸ್ಕಾರದ ಗೌರವಧನ ನಿಗದಿತ ಅವಧಿಯಲ್ಲಿ ಬಿಡುಗಡೆ ಮಾಡುವ ಕುರಿತು ಗಮನಹರಿಸಬೇಕೆಂದು ತಿಳಿಸಿದರು.

ಅಂಗನವಾಡಿ ಮಕ್ಕಳಿಗೆ ರಕ್ಷಣೆ ಬೇಕು:ಇತ್ತೀಚೆಗೆ ಇಒ ಮತ್ತು ನಾನು ಸೇರಿ ತಾಲೂಕಿನ ಹತ್ತಾರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಮಕ್ಕಳಿಗೆ ರಕ್ಷಣೆ ಇಲ್ಲದಿರುವುದು ಕಂಡುಬಂದಿತು. ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ 10ರಿಂದ 15ಮಕ್ಕಳ ಸಂಖ್ಯೆ ಕಂಡುಬರುತ್ತವೆ. ಮಧ್ಯಾಹ್ನದ ವೇಳೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಮಕ್ಕಳ ಮಲಗಿದ್ದವರು. ಸೊಳ್ಳೆಗಳು, ನೊಣಗಳು ಮಕ್ಕಳ ಮೇಲೆ ಇರುವುದು ಕಂಡುಬಂತು. ಸೊಳ್ಳೆಪರದೆ ಸೇರಿದ ಇತರ ಮುನ್ನೆಚ್ಚರಿಕೆ ಕ್ರಮವನ್ನು ಕೇಂದ್ರದ ವರ್ಕರ್ ಮತ್ತು ಸಹಾಯಕಿಯರು ಕೈಗೊಂಡಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ವಿವೇಚನರಹಿತವಾಗಿ ಮಾತನಾಡುತ್ತಾರೆ ಎಂದು ಸಿಡಿಪಿಒ ವೆಂಕಟೇಶ್ ಅವರನ್ನು ಎಚ್ಚರಿಸಿದರು. ಕೂಡಲೇ ಆಯಾ ಗ್ರಾಪಂ ವತಿಯಿಂದ ಸೊಳ್ಳೆಪರದೆ ಇತರ ಅಗತ್ಯತೆಗಳನ್ನು ಕೊಡಿಸುವ ಕೆಲಸ ನಿರ್ವಹಿಸುವಂತೆ ಇಒಗೆ ಸೂಚಿಸಿದರು.

ತಾಪಂ ಇಒ ಶ್ರೀನಿವಾಸ್, ತೋಟಗಾರಿಕೆ, ಪಶು, ಕಾರ್ಮಿಕ,ಅರಣ್ಯ, ರೇಷ್ಮೇ, ಸಿಡಿಪಿಒ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಇಲಾಖೆಗಳ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net