

ಮುಂಡಗೋಡ: ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಕೊಡುವುದಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ನೌಕರ ಮಂಜುನಾಥ ಮುಚ್ಚಂಡಿಯನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಅಹವಾಲು ಆಲಿಸಿದರು.
ಪಟ್ಟಣ ಪಂಚಾಯಿತಿ ನೌಕರ ಮಂಜುನಾಥ ಮುಚ್ಚಂಡಿ ಅವರು ಮನೆಗಳ ಹಕ್ಕು ಬದಲಾವಣೆ, ಭೂ ಪರಿವರ್ತನೆ ಮಾಡಿದ ಜಾಗದ ದಾಖಲೆ ಹಾಗೂ ಫಾರ್ಮ್ ನಂ. 3 ನೀಡಲು ಅನವಶ್ಯಕವಾಗಿ ತೊಂದರೆ ನೀಡುತ್ತಾರೆ ಎಂದು ಸಾರ್ವಜನಿಕರು ದೂರಿದರು.
ಸಭೆಯಲ್ಲಿದ್ದ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಅವರು ಹಲವು ದೂರುಗಳಿಗೆ ಉತ್ತರಿಸಿದರು. ಆದರೆ, ಬಹುತೇಕರು ಮಂಜುನಾಥ ಮುಚ್ಚಂಡಿ ಬಗ್ಗೆ ದೂರು ನೀಡುತ್ತಿರುವುದರಿಂದ ಲೋಕಾಯುಕ್ತರು ಅವರನ್ನು ಸಭೆಗೆ ಕರೆಯಿಸಿ ಸಾರ್ವಜನಿಕರ ದೂರುಗಳ ಬಗ್ಗೆ ಪ್ರಸ್ತಾಪಿಸಿದರು.
ಕರ್ತವ್ಯಲೋಪ ಎಸಗಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು, ಸಾರ್ವಜನಿಕರ ಕೆಲಸಗಳನ್ನು ಮಾಡಿ ಕೊಡದೆ ತೊಂದರೆ ನೀಡಿದರೆ ಕ್ರಮ ವಹಿಸುತ್ತೆವೆ ಎಂದು ಎಚ್ಚರಿಕೆ ನೀಡಿದರು.
ನ್ಯಾಸರ್ಗಿ ಬಳಿ ಚಿಕ್ಕ ನೀರಾವರಿ ಇಲಾಖೆ ನಿರ್ಮಿಸಿರುವ ಬಾಂದಾರ ಕಾಮಗಾರಿ ಕಳಪೆಯಾಗಿದ್ದು ತನಿಖೆ ನಡೆಯಬೇಕು ಹಾಗೂ ಪಟ್ಟಣದಲ್ಲಿನ ಅಗ್ರೋ ಕೆಂದ್ರಗಳಲ್ಲಿ ಹೆಚ್ಚಿನ ದರಕ್ಕೆ ಗೊಬ್ಬರ, ಔಷಧ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಬಾಚಣಕಿಯ ರೈತ ನಿಂಗಪ್ಪ ಕುರಬರ ದೂರಿದರು.
ಗಾಂಧಿನಗರ ಕೊಳಚೆ ಪ್ರದೇಶವೆಂದು ಘೋಷಣೆ ಮಾಡಿ ಹಕ್ಕುಪತ್ರ ವಿತರಿಸಿ ಹಲವು ಸಾರ್ವಜನಿಕರಿಗೆ ಮಾಡಿರುವ ಅನ್ಯಾಯದ ಕುರಿತು ಕೆಲವರು ಸೂಕ್ತ ದಾಖಲೆಗಳೋಂದಿಗೆ ದೂರು ಸಲ್ಲಿಸಿದರು. ಮಲವಳ್ಳಿ ಗ್ರಾಮದ ಕೆರೆಗೆ ಪಂಪ್‌ಸೆಟ್ ಬಳಸಿ ಗದ್ದೆಗಳಿಗೆ ನೀರು ಹಾಯಿಸಲಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ದನಕರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು ಪಿಡಿಒಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಮಲವಳ್ಳಿಯ ನಾರಾಯಣ ಕಮ್ಮಾರ ಎಂಬುವವರು ದೂರು ನೀಡಿದರು. ಈ ಬಗ್ಗೆ ಕ್ರಮ ವಹಿಸಲು ಪಿಡಿಒಗೆ ಅಧಿಕಾರಿಗಳು ಸೂಚಿಸಿದರು.
ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ, ತಹಸೀಲ್ದಾರ್ ಶಂಕರ ಗೌಡಿ, ಲೋಕಾಯುಕ್ತ ಸಿಪಿಐ ವಿನಾಯಕ ಬಿಲ್ಲವ ಇತರರಿದ್ದರು.