

ಕುಶಾಲನಗರ : ಜನರ ಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷೃ ತೋರಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಎಚ್ಚರಿಸಿದರು.
ಮಳೆ ಹಾನಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕುಶಾಲನಗರದ ಎಪಿಸಿಎಂಸ್ ಸಭಾಂಗಣದಲ್ಲಿ ಗುರುವಾರ ನಡೆದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದರು.
ಕೊಡಗಿನಲ್ಲಿ ಅತಿವೃಷ್ಟಿಯಂತಹ ಕಷ್ಟಕರ ಸಮಯದಲ್ಲಿ ಸಂತ್ರಸ್ತರ ಜತೆಯಲ್ಲಿ ಅಧಿಕಾರಿಗಳು ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು. ಇಂತಹ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತೋರಬಾರದು. ಅಸಡ್ಡೆಯಿಂದ ವರ್ತಿಸಬಾರದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ವಾಡಿಕೆಯಂತೆ ಸರಾಸರಿ ಮಳೆಯಾಗುತ್ತಿದೆ. ಅತಿವೃಷ್ಟಿಯಿಂದ ಪ್ರಾಕೃತಿಕ ಅವಘಡ ಸಂಭವಿಸಿದರೆ ಎಲ್ಲ ಇಲಾಖೆಯ ಅಧಿಕಾರಿಗಳು ಸದಾ ಸನ್ನದ್ಧವಾಗಿರಬೇಕು. ಕಳೆದ ಬಾರಿಗೆ ಹೋಲಿಸದರೆ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಕಾವೇರಿ ನದಿ, ಕೆರೆ ಕಟ್ಟೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಾಕೃತಿಕ ವಿಕೋಪ ನಿರ್ವಹಣೆಯ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕು ಆಡಳಿತ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಮಳೆಗೆ ಸಂಬಂಧಿಸಿದಂತೆ ಸಭೆ ನಡೆಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಭೆಗಳನ್ನು ನಡೆಸಿ ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಬೇಕು. ಕಷ್ಟಕರ ಸನ್ನಿವೇಶದಲ್ಲಿ ಕೊಡಗಿನ ಜನತೆಯ ಪರವಾಗಿ ಸರ್ಕಾರ ಅವರಿಗೆ ಧೈರ್ಯ ನೀಡುವ ಮೂಲಕ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಮನದಟ್ಟು ಮಾಡಬೇಕು ನಿರ್ದೇಶಿಸಿದರು.
ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಸೋಮವಾರಪೇಟೆ ತಹಸೀಲ್ದಾರ್ ನವೀನ್ ಕುಮಾರ್, ತಾಪಂ ಇಒ ವೀರಣ್ಣ, ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.