

ರೋಣ: ಪಟ್ಟಣದ ಮುಖ್ಯರಸ್ತೆ ಚರಂಡಿ ಸ್ವಚ್ಛತೆ ಹಾಗೂ ಅತಿಕ್ರಮಣ ತೆರವಿಗೆ ವ್ಯಾಪಾರಸ್ಥರು ಸಹಕಾರ ನೀಡಿದ್ದು ಸ್ವಾಗತಾರ್ಹ. ಇನ್ನು ಮುಂದೆ ವ್ಯಾಪಾರಸ್ಥರು ಪುರಸಭೆ ವ್ಯಾಪ್ತಿಯ ಜಾಗ ಮತ್ತು ರಸ್ತೆ ಅತಿಕ್ರಮಿಸಿ ಗೂಡಂಗಡಿ ನಿರ್ಮಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ ಎಚ್ಚರಿಸಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರಂಡಿಯಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿತ್ತು. ಇದರಿಂದ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ತೊಂದರೆ ಆಗುತ್ತಿತ್ತು. ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಚರಂಡಿ ಸ್ವಚ್ಛತೆ ಕಾರ್ಯ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕಾರ ನೀಡಿದ್ದಾರೆ. ಇನ್ನು ಮುಂದೆ ಚರಂಡಿ ಮೇಲೆ ಹಾಗೂ ರಸ್ತೆಯಲ್ಲಿ ಗೂಡಂಗಡಿ ಇಡಬಾರದು. ಗೂಡಂಗಡಿ ಬದಲು ತಳ್ಳುವ ಗಾಡಿಗಳ ಮೂಲಕ ವ್ಯಾಪರ ನಡೆಸಬೇಕು ಎಂದರು
ಪುರಸಭೆ ಉಪಾಧ್ಯಕ್ಷ ದುರಗಪ್ಪ ಹಿರೇಮನಿ ಮಾತನಾಡಿ, ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಹೂವು-ಹಣ್ಣು , ಇತರ ವ್ಯಾಪಾರಸ್ಥರು ರಸ್ತೆ ಮೇಲೆ ಅಂಗಡಿ ಇಟ್ಟುಕೊಂಡು ವಾಹನ ಸಂಚಾರಕ್ಕೆ ತೊಂದರೆ ಮಾಡುವಂತಿಲ್ಲ. ಹೊಸ ಸಂತೆ ಬಜಾರದಲ್ಲಿ ವ್ಯಾಪಾರ ನಡೆಸಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅಲ್ಲಿಯೇ ವ್ಯಾಪಾರ ಮಾಡಬೇಕು ಎಂದರು.
ಕಸ ವಿಲೇವಾರಿಗೆ ಕ್ರಮ:
ವ್ಯಾಪಾರಸ್ಥರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಪುರಸಭೆ ವಾಹನಗಳಿಗೆ ಕಸ, ಘನತ್ಯಾಜ್ಯ ನೀಡಬೇಕು ಎಂದರು.
ಸಂಗಪ್ಪ ಜಿಡ್ಡಿಬಾಗಿಲ, ಗದಿಗೆಪ್ಪ ಕಿರೇಸೂರ, ಈಶ್ವರ ಕಡಬಲಕಟ್ಟಿ, ಹನುಮಂತ ತಳ್ಳಿಕೇರಿ, ರಂಗವ್ವ ಭಜಂತ್ರಿ, ದಾವಲಸಾಬ ಬಾಡಿನ, ಮಲ್ಲಯ್ಯ ಮಹಾಪುರುಷಮಠ ಇತರರು ಇದ್ದರು.