ಸರ್ಕಾರದ ಹಣ ಪೋಲಾದರೆ ಕ್ರಮ

27spt2
ಸೋಮವಾರಪೇಟೆಯ ಕಕ್ಕೆಹೊಳೆ ಜಂಕ್ಷನ್ ಬಳಿ ಸೇತುವೆ ಕಾಮಗಾರಿಗೆ ಶಾಸಕ ಡಾ.ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು. ಬಿ.ಬಿ.ಸತೀಶ್, ಕೆ.ಎಂ.ಲೋಕೇಶ್, ಯಕೂಬ್, ಚೇತನ್ ಇದ್ದರು.
Published on

ಸೋಮವಾರಪೇಟೆ: ಮಡಿಕೇರಿ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳಿಗೆ ಅವಕಾಶವಿಲ್ಲ. ಸರ್ಕಾರದ ಹಣ ಪೋಲಾಗುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್‌ಗೌಡ ಎಚ್ಚರಿಸಿದರು.

ಮಳೆಹಾನಿ ಪರಿಹಾರ ಯೋಜನೆಯಡಿ ಕಕ್ಕೆಹೊಳೆ ಜಂಕ್ಷನ್ ಬಳಿ ನೂತನ ಸೇತುವೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

70 ವರ್ಷಗಳ ಹಳೆಯದಾದ ಬ್ರಿಕ್ ಆರ್ಚ್ ಮಾದರಿಯ ಈ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ನೂತನ ಸೇತುವೆ ನಿರ್ಮಿಸಲಾಗುವುದು. ಹಾನಗಲ್ಲು ತಲ್ತರೆ ಶೆಟ್ಟಳ್ಳಿ-ತಾಕೇರಿ-ಗರ್ವಾಲೆ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆಗೆ ಅನುದಾನ ಕೋರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಅವರಿಗೆ ಮನವಿ ಮಾಡಲಾಗಿತ್ತು. ತಕ್ಷಣವೇ ಸ್ಪಂದಿಸಿದ ಸೇತುವೆ ದುರಸ್ತಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹಾರಂಗಿ ಮತ್ತು ಐಗೂರು ಕಬ್ಬಿಣ ಸೇತುವೆ ಕಾಮಗಾರಿ, ಕುಶಾಲನಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ, ನ್ಯಾಯಾಲಯ ಸಮುಚ್ಚಯ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಕೆ.ಪಿ.ಚಂದ್ರಕಲಾ, ಕೆ.ಎಂ.ಲೋಕೇಶ್, ಪ್ರಮುಖರಾದ ಕೆ.ಎ.ಯಾಕುಬ್, ಚೇತನ್, ಎಚ್.ಎ.ನಾಗರಾಜ್, ಜಾನಕಿ ವೆಂಕಟೇಶ್, ಸಬಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net