

ಕಳಸ: ಕಳಸದಲ್ಲಿ ಟ್ರಾಫಿಕ್ ಸಮಸ್ಯೆಯ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್ ನಿಯಮಗಳನ್ನು ಪಾಲಿಸದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಹೇಳಿದರು.
ಕಳಸ ಪಟ್ಟಣದಲ್ಲಿ ಟ್ರಾಫಿಕ್ ಜಾಗೃತಿ ಮತ್ತು ಪಾರ್ಕಿಂಗ್ ಸಮಸ್ಯೆಗಳ ಕುರಿತು ಆಟೋ, ಬಸ್, ಲಾರಿ ಚಾಲಕರು ಹಾಗೂ ಮಾಲೀಕರು, ಸಾರ್ವಜನಿಕರ ಜತೆ ನಡೆದ ಸಭೆಯಲ್ಲಿ ಮಾತನಾಡಿ, ಕಳಸ ಮುಖ್ಯರಸ್ತೆಯಲ್ಲಿ ದಿನಕ್ಕೊಂದು ಬದಿಯಲ್ಲಿ ವಾಹನ ನಿಲುಗಡೆ ಮಾಡಬೇಕು, ಬಸ್ ಆಟೋಗಳನ್ನು ಎಲ್ಲಂದರಲ್ಲಿ ನಿಲ್ಲಿಸಬಾರದು. ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್‌ಗೆ ಮಾರ್ಕ್ ಮಾಡಲಾಗುವುದು ಎಂದರು.
ಕಳಸದಲ್ಲಿ ಪಾಳುಬಿದ್ದ ಬಸ್ ನಿಲ್ದಾಣವನ್ನು ದುರಸ್ತಿ ಮಾಡಿದ ನಂತರ ಎಲ್ಲ ಬಸ್‌ಗಳು ನಿಲ್ದಾಣಕ್ಕೆ ಬರುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲಂದರಲ್ಲಿ ನಿಲ್ಲಿಸುವ ಸರ್ಕಾರಿ ಬಸ್‌ಗಳ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಒಪ್ಪಿಗೆಯ ಮೇರೆಗೆ ಕಳಸ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುದುರೆಮುಖ ವೃತ್ತ ನಿರೀಕ್ಷಕ ಆದರ್ಶ, ಕಳಸ ಪಿಎಸ್‌ಐ ಚಂದ್ರಶೇಖರ್, ಗ್ರಾಪಂ ಸದಸ್ಯ ಸಂತೋಷ್ ಹಿನಾರಿ, ಕಳಸ ಪಿಡಿಒ ಕವೀಶ್ ಇದ್ದರು.