

ಎಚ್.ಡಿ.ಕೋಟೆ : ಮದುವೆ ವಯಸ್ಸು ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ಕಡ್ಡಾಯವಾಗಿ ತುಂಬಿರಬೇಕು. ಇಲ್ಲದಿದ್ದರೆ ಅಂತವರ ಮೇಲೆ ಪೋಕ್ಸೋ ಅಡಿಯಲ್ಲಿ ಕೇಸ್ ದಾಖಲು ಮಾಡಿ ಅವರನ್ನು ಬಂಧಿಸಲಾಗುತ್ತದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಬಾಲ್ಯ ವಿವಾಹವಾಗಿ ಹದಿ ಹರೆಯದವರು ಗರ್ಭಿಣಿಯರಾಗಿ ಬರುತ್ತಿದ್ದಾರೆ ಮತ್ತು ಹದಿ ಹರೆಯದವರ ಗರ್ಭಿಣಿ ಪ್ರಕರಣಗಳು ನಮ್ಮ ತಾಲೂಕಿನಲ್ಲಿ ಹೆಚ್ಚಾಗಿ ಆಗುತ್ತಿವೆ. ಇನ್ನು ಮುಂದೆ ಆ ರೀತಿ ಪ್ರಕರಣಗಳು ವರದಿ ಆಗಬಾರದು ಎಂದರು.
ಪೌಷ್ಟಿಕ ಆಹಾರ ಸೇವನೆ, ಸುರಕ್ಷಿತ ಹೆರಿಗೆ, ಸುರಕ್ಷಿತ ತಾಯಿತನ, ಸುರಕ್ಷಿತ ಶಿಶು ಆರೈಕೆ ಬಗ್ಗೆ ಅರಿವು ಮೂಡಿಸುವುದು ಹಾಗೂ ತಾಯಿ, ಮರಣ ಮತ್ತು ಶಿಶು ಮರಣವನ್ನು ತಪ್ಪಿಸುವುದು ಪ್ರಮುಖ ಉದ್ದೇಶವಾಗಬೇಕು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆ ಡಾ.ಪೂರ್ಣಿಮಾ, ಆರೋಗ್ಯ ಇಲಾಖೆಯ ನಾಗೇಂದ್ರ, ಅರಲಪ್ಪ, ಅಶೋಕ್, ರವಿರಾಜ್, ಲಕ್ಷ್ಮೀ ಭಟ್, ರಾಜು ಶಿವಕುಮಾರ್, ವಿದ್ಯಾ, ನಾಗಮ್ಮ, ರೀನಾ, ದೇವಿಂದ್ರಮ್ಮ, ಮಂಜು ಪ್ರಸಾದ್, ಆಶಾ ಕಾರ್ಯಕರ್ತೆಯರು ಇತರರು ಇದ್ದರು.