ಸಂವಿಧಾನ ಬದಲಾವಣೆ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ :ಮೇಯರ್ ಶಿವಕುಮಾರ್

shivakumar
Published on

ಮೈಸೂರು: ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ಜಾರಿಯಾದ ನಂತರ 110 ಬಾರಿ ತಿದ್ದುಪಡಿಯಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ 80 ಬಾರಿ ಸಂವಿಧಾನ ತಿದ್ದುಪಡಿಯಾಗಿದೆ. ಸಂವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ಇದೀಗ ಬಿಜೆಪಿಯ ಮೇಲೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂವಿಧಾನವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ, ಬದಲಾಯಿಸಲು ಆಗುವುದಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದವರ ವಿರುದ್ಧ ಪಕ್ಷ ಈಗಾಗಲೇ ಕ್ರಮ ಕೈಗೊಂಡಿದೆ. ಆ ಮೂಲಕ ಸ್ಪಷ್ಟವಾದ ಸಂದೇಶ ರವಾನಿಸಿದೆ. ಹೀಗಿದ್ದರೂ ಕಾಂಗ್ರೆಸ್‌ನ ನಾಯಕರು ಬಿಜೆಪಿಯ ಮೇಲೆ ದಲಿತರಲ್ಲಿ ಅಪನಂಬಿಕೆ ಮೂಡಿ ಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ್ ಮಾತನಾಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭ 24 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸುವ ತೀರ್ಮಾನ ಕೈಗೊಂಡಿತು. ಪೌರಕಾರ್ಮಿಕರಿಗೆ ಪ್ರತಿ ತಿಂಗಳು 2 ಸಾವಿರ ರೂಗಳನ್ನು ಸಂಕಷ್ಟಪರಿಹಾರವಾಗಿ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೌರ ಕಾರ್ಮಿಕರಿಗೆ ಯಾವುದೇ ಅನುಕೂಲಗಳು ಆಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಆರ್. ಲಿಂಗಪ್ಪ, ಸಂದೇಶ್ ಸ್ವಾಮಿ, ಭಾಗ್ಯವತಿ, ರಾಜೇಶ್ವರಿ, ಬಿಜೆಪಿ ನಗರ ಸಹ ವಕ್ತಾರ ದೇವರಾಜ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net