

ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಅರೆಶಿರೂರು ಜಂಕ್ಷನ್ ಬಳಿ ಗೋಮಾಳ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿ ನಕಲಿ ದಾಖಲೆ ನೀಡಿ ವಿದ್ಯುತ್ ಸಂಪರ್ಕ ಪಡೆದವರಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್, ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮೀ ಬಿಸಿ ಮುಟ್ಟಿಸಿದ್ದಾರೆ.
ಮಂಗಳವಾರ ವಿಜಯವಾಣಿಯಲ್ಲಿ ಗೋಳಿಹೊಳೆ ಗೋಮಾಳಕ್ಕೆ ಕನ್ನ ಎಂಬ ವಿಶೇಷ ವರದಿ ಪ್ರಕಟಗೊಂಡ ಬಳಿಕ ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ ಸ್ಥಳ ಪರಿಶೀಲನೆಗೆ ಗ್ರಾಮ ಕರಣಿಕರನ್ನು ಕಳುಹಿಸಿದ್ದಾರೆ.
ಅರೆಶಿರೂರು, ಕಾಲ್ತೋಡು, ಕೊಲ್ಲೂರು, ಬೈಂದೂರು - ಕೊಲ್ಲೂರು ರಾಜ್ಯ ಹೆದ್ದಾರಿ ಬದಿಯಲ್ಲಿದ್ದು, ಗ್ರಾಮೀಣ ಭಾಗದ ಹತ್ತಾರು ಹಳ್ಳಿಗಳ ಬೆಸೆಯುವ ಕೊಂಡಿ. ಸರ್ವೇ ನಂಬರ್ 329ರಲ್ಲಿ 9.29 ಎಕರೆ ಭೂಮಿ ಗೋಮಾಳವಾಗಿ ಮೀಸಲಿಡಲಾಗಿದ್ದು, ಅದರಲ್ಲಿ 5 ಎಕರೆ ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಗೆ ನೀಡಲಾಗಿದ್ದು, ಸಂತೆಗೆ 5 ಸೆಂಟ್ಸ್, ಆರೋಗ್ಯ ಕೇಂದ್ರಕ್ಕೆ 5 ಸೆಂಟ್ಸ್ ಮತ್ತು 7 ಸೆಂಟ್ಸ್ ಖಾಸಗಿ ಹೋಟೆಲ್‌ಗೆ ನೀಡಲಾಗಿದೆ. ಉಳಿದ 4.12 ಎಕರೆ ಜಾಗ ಒತ್ತುವರಿಯಾಗಿದೆ.
ಅರೆಶಿರೂರು ಪೇಟೆಯಾಗಿ ಬೆಳೆಯುತ್ತಿದ್ದು, ಎಪಿಎಂಸಿ, ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ ಜಾಗ ಅಗತ್ಯವಿದ್ದು, ಬೆಲೆ ಬಾಳುವ ಜಾಗ ಪರಾಭಾರೆ ಮಾಡುವ ಬದಲು ಸರ್ಕಾರಿ ಅವಶ್ಯಕತೆಗೆ ಬಳಸಬೇಕು ಎನ್ನುವುದು ಸ್ಥಳೀಯರ ಒತ್ತಾಯ. ಗೋಮಾಳ ಒತ್ತುವರಿ ತೆರವು ಬಗ್ಗೆ ಗ್ರಾಮ ಪಂಚಾಯಿತಿ ಮಾತ್ರ ಆಸಕ್ತಿ ವಹಿಸಿಲ್ಲ. ಕಟ್ಟಡ, ವಿದ್ಯುತ್ ಸಂಪರ್ಕ, ವಾಣಿಜ್ಯ ಪರವಾನಗಿ ಎಲ್ಲವನ್ನೂ ಅಕ್ರಮವಾಗಿ ಪಡೆದಿದ್ದರೂ ಗ್ರಾಪಂ ಸುಮ್ಮನಿರುವುದೇಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಒತ್ತುವರಿ ತೆರವು ಮಾಡಿ ಸರ್ಕಾರ ವಶಕ್ಕೆ ಪಡೆಯಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಹಿಂದುಪರ ಸಂಘಟನೆಗಳು ಎಚ್ಚರಿಸಿವೆ.
ಜಾಗದ ಸರ್ವೇ, ಕಟ್ಟಡ ಪರವಾನಗಿ, ಪಡೆದಿರುವ ಸೌಲಭ್ಯ ಅಕ್ರಮವಾಗಿದೆಯೆ ಎನ್ನುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಬೈಂದೂರು ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ಗೋಮಾಳ ಜಾಗ ಸರ್ವೇಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಒತ್ತುವರಿ ತೆರವು ಮಾಡಲಾಗುವುದು. ಕಟ್ಟಡ ನಿರ್ಮಿಸಿ ಅಕ್ರಮವಾಗಿ ವಿದ್ಯುತ್ ಸೌಲಭ್ಯ ಪಡೆಯಲು ನಕಲಿ ದಾಖಲೆ ನೀಡಿದ್ದರೆ ಅದರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. - ಕೂರ್ಮಾ ರಾವ್ ಜಿಲ್ಲಾಧಿಕಾರಿ ಉಡುಪಿ ಕಾನೂನಿನಲ್ಲಿ ಗೋಮಾಳ ಒತ್ತುವರಿಗೆ ಅವಕಾಶ ಇಲ್ಲ. ಆದರೂ ಮಹಡಿ ಕಟ್ಟಡಗಳು ನಿರ್ಮಿಸಿ ಅದಕ್ಕೆ ವಿದ್ಯುತ್ ಇನ್ನಿತರ ಸೌಲಭ್ಯ ಪಡೆದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗೊತ್ತಿಲ್ಲದಂತೆ ಕೂತಿರುವುದು ಅಚ್ಚರಿಯಾಗಿದೆ. ಮನೆ ಇಲ್ಲದೆ ನಿವೇಶನಕ್ಕೆ ಅರ್ಜಿ ಹಾಕಿದವರಿಗೆ ನಿವೇಶನ ನೀಡಲು ನೂರಾರು ತಕರಾರು ಮಾಡುವ ಅಧಿಕಾರಿಗಳು ಇಷ್ಟು ದೊಡ್ಡ ಅಕ್ರಮ ನಡೆದರೂ ಕ್ರಮಕ್ಕೆ ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. - ಸುರೇಂದ್ರ ಪೂಜಾರಿ ಸಾಮಾಜಿಕ ಕಾರ್ಯಕರ್ತ, ತೊಪ್ಲು ಗೋಮಾಳ ಭೂಮಿ ಅತಿಕ್ರಮಣ ಖಂಡನೀಯ. ರಾಜ್ಯ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತ ತಕ್ಷಣ ಅತಿಕ್ರಮಣಕಾರರ ಬಂಧಿಸಿ, ಗೋಮಾಳ ಭೂಮಿಯಲ್ಲಿ ನಿರ್ಮಿಸಲಾದ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಿ ಮರು ಸ್ವಾಧೀನಪಡಿಸಿಕೊಳ್ಳಬೇಕು. ಇಂಥವರ ವಿರುದ್ಧ ಉಗ್ರ ಶಿಕ್ಷೆಯಾಗಬೇಕು. ಗೋಳಿಹೊಳೆ ಪ್ರಕರಣದಲ್ಲಿ ಬೈಂದೂರು ತಹಸೀಲ್ದಾರ್ ನೀಡಿರುವ ಭರವಸೆ ಸ್ವಾಗತಾರ್ಹ. ಆದರೆ ಇದು ಕೇವಲ ಮಾತಾಗಬಾರದು. ಕೂಡಲೇ ಅನುಷ್ಠಾನಿಸಬೇಕು. - ಜಿ. ವಾಸುದೇವ ಭಟ್ ಪೆರಂಪಳ್ಳಿ ಸಾಮಾಜಿಕ ಕಾರ್ಯಕರ್ತ, ಉಡುಪಿ